`ಬ್ರಿಟಿಷರು ಬರುವುದಕ್ಕೆ ಮುನ್ನ ಭಾರತದಲ್ಲಿ ಬಡತನ ಇರಲಿಲ್ಲ’

 

“ಬ್ರಿಟೀಷರು ಭಾರತಕ್ಕೆ ಬರುವ ಮುನ್ನ ಭಾರತ ಒಂದು ಸಂಪದ್ಭರಿತ ರಾಷ್ಟ್ರವಾಗಿತ್ತು ಮತ್ತು ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು. ಆದರೆ 200 ವರ್ಷಗಳ ಬ್ರಿಟಿಷ್ ಆಡಳಿತ ಭಾರತವನ್ನು ದಾರಿದ್ರ್ಯದ ಕೂಪಕ್ಕೆ ತಳ್ಳಿತು” ಎಂದು ಕಾಂಗ್ರೆಸ್ ನಾಯಕ ಶಶಿತರೂರ್ ಹೇಳಿದ್ದಾರೆ.

ಭಾರತದಲ್ಲಿ ರಾಜಕೀಯ ಐಕ್ಯತೆ ಮತ್ತು ಅಭಿವೃದ್ಧಿಯನ್ನು ತರುವಲ್ಲಿ ಬ್ರಿಟೀಷರ ಯಾವುದೇ ಪಾತ್ರವೂ ಇಲ್ಲ ಎಂದು ತರೂರ್ ಹೇಳಿದ್ದಾರೆ. ತಮ್ಮ ಹೊಸ ಪುಸ್ತಕ `ಕರಾಳತೆಯ ಯುಗ – ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯ’  ಬಿಡುಗಡೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ತರೂರ್, “ಬ್ರಿಟಿಷರು ಭಾರತವನ್ನು ಆಳಿದ ಅವಧಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ವಿಸ್ತರಿಸಿ ದೇಶದ ಆಗುಹೋಗುಗಳ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿದ್ದರು” ಎಂದು ಹೇಳಿದ್ದಾರೆ.

“ಬ್ರಿಟಿಷ್ ಯುಗವನ್ನು ಇಂದು ಪುನಃ ಅವಲೋಕನ ಮಾಡುವ ಅವಶ್ಯಕತೆ ಇದ್ದು ತಮ್ಮ ಹೊಸ ಕೃತಿಯಲ್ಲಿ ಈ ಪ್ರಯತ್ನವನ್ನು ಮಾಡಿದ್ದೇನೆ” ಎಂದು ತರೂರ್ ಹೇಳಿದ್ದಾರೆ.

“200 ವರ್ಷಗಳಿಗೂ ಮುನ್ನ ಬ್ರಿಟಿಷರು ವಿಶ್ವದ ಅತ್ಯಂತ ಶ್ರೀಮಂತ ದೇಶವನ್ನು ಆಕ್ರಮಿಸಿಕೊಂಡರು. ಆ ಸಂದರ್ಭದಲ್ಲಿ ಭಾರತ ವಿಶ್ವದ ಜಿಡಿಪಿಯ ಶೇ 23ರಷ್ಟನ್ನು ಹೊಂದಿತ್ತು. ಇಲ್ಲಿ ಬಡತನ ಎನ್ನುವುದೇ ಇರಲಿಲ್ಲ” ಎಂದು ತರೂರ್ ಹೇಳಿದರು.

“ಜವಳಿ, ಉಕ್ಕು ಮತ್ತು ಹಡಗು ನಿರ್ಮಾಣದಲಿ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿದ್ದ ಭಾರತದಲ್ಲಿ ಎಲ್ಲವೂ ಇತ್ತು. ಆದರೆ ಬ್ರಿಟಿಷರ 200 ವರ್ಷಗಳ ಶೋಷಣೆಯ ಪರಿಣಾಮವಾಗಿ ದೇಶ 1947ರ ವೇಳೆಗೆ ದೀವಾಳಿಯಾಗಿತು”್ತ ಎಂದು ತರೂರ್ ಆರೋಪಿಸಿದ್ದಾರೆ.

ಹಿಂದೂ ಮುಸ್ಲಿಂ ಸಂಘರ್ಷ ಮತ್ತು ಜಾತಿವ್ಯವಸ್ಥೆಯ ಪ್ರಗತಿಗೂ ಬ್ರಿಟಿಷರೇ ಕಾರಣ ಎಂದು ಹೇಳಿರುವ ತರೂರ್, ಪಾಶ್ಚಿಮಾತ್ಯ ಚರಿತ್ರಕಾರರು ಬ್ರಿಟಿಷ್ ಸಾಮ್ರಾಜ್ಯದ ವಂದಿಮಾಗಧರಂತೆ ತಮ್ಮ ಕೃತಿಗಳನ್ನು ರಚಿಸಿರುವುದಾಗಿ ಆರೋಪಿಸಿದ್ದಾರೆ.