ವೈಯಕ್ತಿಕವಾಗಿ ರೈ ಮೇಲೆ ದ್ವೇಷವಿಲ್ಲ ಎಂದ ಕಲ್ಲಡ್ಕ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ವೈಯಕ್ತಿಕವಾಗಿ ನನಗೆ ಅವರ (ರೈ) ಮೇಲೆ ಯಾವುದೇ ದ್ವೇಷವಿಲ್ಲ. ಆದರೆ ಸೈದ್ಧಾಂತಿಕವಾಗಿ ನನಗೂ ಅವರಿಗೂ ಭಿನ್ನಾಭಿಪ್ರಾಯಗಳಿವೆ.  ನನಗೆ ತಪ್ಪೆಂದು ಕಂಡದ್ದನ್ನು ನಾನು ವಿರೋಧಿಸುತ್ತೇನೆ ಹಾಗೂ ಈ ನಿಟ್ಟಿನಲ್ಲಿ ನಾನು ಯಾವುದೇ ಮಟ್ಟಕ್ಕೂ ಹೋಗಬಲ್ಲೆ”.

-ಆರೆಸ್ಸೆಸ್ ನಾಯಕ ಕಲ್ಲಡ್ಕ್ ಪ್ರಭಾಕರ್ ಭಟ್ ತಮ್ಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರೈ ನಡುವಣ ಸಂಬಂಧದ ಬಗ್ಗೆ ವಿವರಿಸಿದ್ದು ಹೀಗೆ. ಇಬ್ಬರು

ನಾಯಕರೂ ಮತೀಯ ಘಟನೆಗಳ ವಿಚಾರದಲ್ಲಿ ಸಾಕಷು ಕೆಸರೆರಚಾಟದಲ್ಲಿ  ತೊಡಗಿರುವುದು ಈಗಾಗಲೇ ತಿಳಿದಿರುವ ವಿಚಾರ.

ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಭಟ್,  ತಮ್ಮ ಭಾಷಣಗಳು ಪ್ರಚೋದನಾತ್ಮಕವಾಗಿಲ್ಲ ಎಂದು ವಾದಿಸಿದರಲ್ಲದೆ  ತಮ್ಮ ಭಾಷಣಗಳನ್ನು ಸಂಪೂರ್ಣವಾಗಿ ಕೇಳಬೇಕು ಅಥವಾ ಓದಬೇಕೇ ವಿನಹ  ಕೇವಲ ಗೆರೆಗಳ ನಡುವೆ ಇರುವ ಅರ್ಥವನ್ನಷ್ಟೇ ಊಹಿಸುವುದಲ್ಲ ಎಂದರು.

“ಹಿಂದೂಗಳಲ್ಲಿ ಜಾಗೃತಿಗೆ ಕರೆ ನೀಡುವ ಸಂದೇಶವನ್ನಷ್ಟೇ ನನ್ನ ಭಾಷಣಗಳು ನೀಡುತ್ತಿದ್ದು ನಾನು ಮುಂದೆಯೂ ಇಂತಹ ಭಾಷಣಗಳನ್ನು ನೀಡುತ್ತೇನೆ” ಎಂದರು.

ತಾವು ಕೇವಲ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿದ್ದು ಎಂದು ಹೇಳಿದ ಭಟ್, “ಪ್ರತಿಯೊಂದು  ಘಟನೆಗೆ ಮತೀಯ ಬಣ್ಣ ನೀಡಬೇಡಿ. ವೈಯಕ್ತಿಕ ದ್ವೇಷದಿಂದಾಗಿ ನಡೆದ ಘಟನೆಯನ್ನೂ ಮತೀಯ ಘಟನೆ ಎಂದು ಹೇಳುವ ಹಾಗಿಲ್ಲ. ಏನಾದರೂ ಅಹಿತಕರ ಘಟನೆ ನಡೆದಾಗ ಕ್ರೈಸ್ತ ಹಾಗೂ ಮುಸ್ಲಿಂ ನಾಯಕರು ಮುಂದೆ ಬಂದು  ಎಲ್ಲವನ್ನೂ ಸರಿಪಡಿಸಬೇಕು” ಎಂದರು.