ಶಿಕ್ಷಕರು, ಸಿಬ್ಬಂದಿಗೆ 6 ತಿಂಗಳಿಂದ ಸಂಬಳವಿಲ್ಲ

ಕರಾವಳಿ ಅಲೆ ವರದಿ

ಮಂಗಳೂರು : ಮಾಧ್ಯಮಿಕ ಶಿಕ್ಷಣದ ಉತ್ತೇಜನ ಮತ್ತು ಶಿಕ್ಷಣ ಗುಣಮಟ್ಟದ ಅಭಿವೃದ್ಧಿ ಉದ್ದೇಶದೊಂದಿಗೆ 2009ರಲ್ಲಿ ಜಾರಿಗೊಳಿಸಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಅಡಿಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಕಳೆದ ಆರು ತಿಂಗಳಿಂದ ಸಂಬಳವನ್ನೇ ಪಡೆದಿಲ್ಲ ! ಹೌದು, ಈ ಯೋಜನೆಯಡಿಯಲ್ಲಿ ಶಾಲೆಗೆ ನೇಮಕಗೊಂಡಿರುವ ಶಿಕ್ಷಕರು ಮತ್ತು ಸಿಬ್ಬಂದಿ ದುರದೃಷ್ಟವಂತರೆಂದೇ ಹೇಳಬೇಕು. ಕಳೆದ 7 ತಿಂಗಳಿಂದ ಸಂಬಳ ಸ್ವೀಕರಿಸದೆ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

“ಸಂಬಳ ಬಾರದೆ ರೂಮು ಬಾಡಿಗೆ ಬಾಕಿಯಿಟ್ಟಿದ್ದೇನೆ. ಇದೀಗ ನನ್ನ ಸ್ನೇಹಿತರು ಕೂಡ ನನ್ನ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ” ಎಂದು ಯೋಜನೆಯಡಿಯಲ್ಲಿ ನೇಮಕಗೊಂಡಿರುವ ಸಿಬ್ಬಂದಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

“ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ನನಗೆ ಸಮಸ್ಯೆ ಎದುರಾಗಿರಲಿಲ್ಲ. ಆದರೆ ತೊಂದರೆ ಎದುರಾಗಿದ್ದು ನಾನು ಆರ್ ಎಂ ಎಸ್ ಎ ನಡೆಸುತ್ತಿರುವ ಹೈಸ್ಕೂಲಿಗೆ ವರ್ಗಾವಣೆಯಾಗಿ ಹೋದ ಬಳಿಕ. 2017ರ ಸೆಪ್ಟೆಂಬರ್ ತಿಂಗಳಿಂದ ನನ್ನ ಖಾತೆಗೆ ಸಂಬಳ ಬಂದಿಲ್ಲ. ನಿರ್ಧಿಷ್ಟವಾಗಿ ಸಂಬಳ ಪಾವತಿಸದೇ ಇದ್ದರೆ ನಾನು ನನ್ನ ಜೀವನ ಹೇಗೆ ನಿರ್ವಹಿಸಬೇಕು ? ಪ್ರತಿಭಟನೆ ಮಾಡಿದರೆ ಅಥವಾ ಪಾಠ ಮಾಡದೆ ಕುಳಿತರೆ ಮಕ್ಕಳು ತೊಂದರೆಗೊಳಗಾಗುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗುತ್ತಾರೆ” ಎಂದು ಕುಂಪಲ ಹೈಸ್ಕೂಲು ಶಿಕ್ಷಕಿ ದೇವಿಕಾ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಈ ಪ್ರಕರಣ ಸೋಮವಾರ ನಡೆದ ಮಂಗಳೂರು ತಾಲೂಕು ಕರ್ನಾಟಕ ಅಭಿವೃದ್ಧಿ ಯೋಜನೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಳಕಿಗೆ ಬಂದಿದೆ.

LEAVE A REPLY