ಅತಿಥಿ ಉಪನ್ಯಾಸಕರಿಗೆ 5 ತಿಂಗಳಿಂದ ವೇತನವಿಲ್ಲ

ಶಿವಮೊಗ್ಗ : ಕಳೆದ ಐದು ತಿಂಗಳಿಂದ ರಾಜ್ಯಾದ್ಯಂತದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರ್ಕಾರ ವೇತನ ಬಾಕಿ ಮಾಡಿದೆ. ಜುಲೈಯಿಂದ ಗೌರವ ವೇತನ ಬಾಕಿಯಾಗಿದೆ.

“ನಮಗೆ ಕಡಿಮೆ ವೇತನ ನೀಡುತ್ತಿರುವ ಸರ್ಕಾರ, ಇದೀಗ ತಿಂಗಳ ವೇತನ ತಡೆಹಿಡಿದಿದೆ. ನಾವು ಜೀವನ ನಡೆಸುವುದು ಹೇಗೆ ? ಕೆಲಸ ಮಾಡುತ್ತಿರುವಲ್ಲಿಗೆ ಪ್ರಯಾಣಿಸುವುದಾದರೂ ಹೇಗೆ ? ಸರ್ಕಾರವು ಕಾರ್ಮಿಕರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದೆ ಎಂಬುದು ಇದರಿಂದ ಅರ್ಥವಾಗುತ್ತದೆ” ಎಂಬುದು ಅತಿಥಿ ಉಪನ್ಯಾಸಕರರು ದೂರಿದ್ದಾರೆ.

ರಾಜ್ಯದಲ್ಲಿರುವ 412 ಪ್ರಥಮ ದರ್ಜೆ ಕಾಲೇಜುಗಳಲ್ಲಿ 12,800ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ತಿಂಗಳಿಗೆ ಬರೇ 9,500 ರೂ ವೇತನ ನೀಡಲಾಗುತ್ತಿದೆ ಎಂದು ಸರ್ಕಾರಿ ಪದವಿ ಕಾಲೇಜು ಅತಿಥಿ ಶಿಕ್ಷಕರ ಸಮನ್ವಯ ಸಮಿತಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಕುಮಾರ್ ಹೇಳಿದರು.

ಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರ ಬಾಕಿ ಉಳಿದಿರುವ ತಿಂಗಳ ಸಂಬಳ ತಕ್ಷಣ ಬಿಡುಗಡೆ ಮಾಡುವಂತೆ ಸಮಿತಿ ಸರ್ಕಾರದೆದುರು ಆಗ್ರಹಿಸಿದೆ.