ಪೇಪರಿನಲ್ಲಿ ತಿಂಡಿಪೊಟ್ಟಣ ಕಟ್ಟಿಕೊಟ್ಟರೆ ಎಚ್ಚರ

ಅಸುರಕ್ಷಿತ ಆಹಾರ ಪತ್ತೆಯಾದರೆ ಲಕ್ಷಾಂತರ ರೂ ದಂಡ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : `ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ -2006’ರ ಪ್ರಕಾರ ಜನರಿಗೆ ಆಹಾರ ಪದಾರ್ಥಗಳನ್ನು ದಿನಪತ್ರಿಕೆಯಲ್ಲಿ ಕಟ್ಟಿಕೊಡುವುದನ್ನು ನಿಷೇಧಿಸಿ ಮೂರು ತಿಂಗಳ ಹಿಂದೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ. ಆದರೆ ಈ ಕಾನೂನು ಇನ್ನೂ ಕೂಡಾ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ಈಗಲೂ ರದ್ದಿ ಪೇಪರುಗಳನ್ನು ತಿಂಡಿಪೊಟ್ಟಣಗಳನ್ನು ಕಟ್ಟಿಕೊಡಲು ಬಳಸಲಾಗುತ್ತಿದೆ. ಪೇಪರಿನಲ್ಲಿರುವ ಇಂಕ್, ರಾಸಾಯನಿಕ ತಿಂಡಿಯಲ್ಲಿ ವಿಷಕಾರಿಯಾಗಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ.

ಈ ಬಗ್ಗೆ ಬಹುತೇಕ ಕಡೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಆಯಾ ಅಂಗಡಿ, ಮಾಲ್, ಆಹಾರ ತಯಾರಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಆದರೆ ನಗರದಲ್ಲಿ ಮಾತ್ರ ಇಂತಹ ಅಧಿಕಾರಿಗಳು ಕಂಡು ಬರುತ್ತಿಲ್ಲ ಅನ್ನೋದು ಸಾರ್ವಜನಿಕರ ಆರೋಪ.

ರಾಜ್ಯದಲ್ಲಿ ಆಹಾರ ಸುರಕ್ಷತೆ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಿಬ್ಬಂದಿ ಕೊರತೆ ಇರುವುದರಿಂದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳನ್ನು (ನೋಂದಣಿ ಹೊರತುಪಡಿಸಿ) ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಲು ರಾಜ್ಯ ಸರಕಾರ ಈಗಾಗಲೇ ಅಧಿಸೂಚಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಬಕಾರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೈಗಾರಿಕಾಭಿವೃದ್ಧಿ ಮತ್ತು ಕೈಗಾರಿಕೆಗಳು ಹಾಗೂ ವಾಣಿಜ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಮಾರಾಟ ನಿರ್ದೇಶನಾಲಯ, ಔಷಧ ನಿಯಂತ್ರಣ ಇಲಾಖೆಯ ಅರ್ಹ ಸಿಬ್ಬಂದಿಯನ್ನು ಇದಕ್ಕಾಗಿ ನಿರ್ವಹಿಸಲು ಸೂಚಿಸಲಾಗಿದೆ.

ಕಡಿಮೆ ಬೆಲೆಯ ಅಥವಾ ಕೀಳು ದರ್ಜೆಯ ಆಹಾರ ಪದಾರ್ಥಗಳನ್ನು ಬೆರೆಸುವುದು, ತಿನ್ನಲು ಯೋಗ್ಯವಲ್ಲದ ಹಾಗೂ ಹಾನಿಕಾರಕ ಪದಾರ್ಥ ಬೆರೆಸುವುದು, ನಕಲಿ ಪದಾರ್ಥಗಳನ್ನು ಬೆರೆಸುವುದು ಕೂಡ ಕಾಯ್ದೆ ಪ್ರಕಾರ ಅಪರಾಧ. ಹೀಗಾಗಿ ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಜನಸಾಮಾನ್ಯರು ತಾವು ಬಳಸುವ ಆಹಾರ ಪದಾರ್ಥಗಳ ಮಾದರಿಯನ್ನು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆಯಡಿ ಅಂಕಿತ ಅಧಿಕಾರಿಗಳು ಪಡೆದುಕೊಂಡು ಪರೀಕ್ಷೆ ನಡೆಸಬೇಕಾಗಿದೆ.

ಅಸುರಕ್ಷಿತ ಆಹಾರ ಪತ್ತೆಯಾದರೆ ಕನಿಷ್ಠ 25,000 ರೂ.ಗಳಿಂದ 10 ಲಕ್ಷ ರೂ.ವರೆಗೆ ದಂಡ ಹಾಗೂ ಕನಿಷ್ಠ 6 ತಿಂಗಳಿನಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎನ್ನುತ್ತಾರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾರ್ಯಾಲಯದ ಅಂಕಿತ ಅಧಿಕಾರಿ ರಾಜೇಶ್.