5000ಕ್ಕೂ ಹೆಚ್ಚು ಶಿಕ್ಷಕರಿಗೆ ನವೆಂಬರ್ ವೇತನವಿಲ್ಲ ?

ಬೆಂಗಳೂರು : ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರಿಗೆ 2006ರಿಂದ ನೀಡಲಾರಂಭಿಸಲಾಗಿದ್ದ ವಿಶೇಷ ಭತ್ಯೆಯನ್ನು 2008ರÀಲ್ಲಿಯೇ ರದ್ದುಪಡಿಸಲಾಗಿರುವ ಹೊರತಾಗಿಯೂ ಶಿಕ್ಷಕರು ಕಳೆದ ತಿಂಗಳಿನ ತನಕ ಈ ಭತ್ಯೆ ಪಡೆಯುತ್ತಿದ್ದುದರಿಂದ ಶಿಕ್ಷಕರಿಗೆ ನೀಡಲಾಗಿರುವ ಹೆಚ್ಚುವರಿ ಭತ್ಯೆಯನ್ನು ಅವರ ವೇತನ ಮೂಲಕ ಸರಿದೂಗಿಸಲು ಸರಕಾರ ನಿರ್ಧರಿಸಿರುವುದರಿಂದ ರಾಜ್ಯದ 5,000ಕ್ಕೂ ಹೆಚ್ಚು ಸರಕಾರಿ ಶಿಕ್ಷಕರು ತಮ್ಮ ನವೆಂಬರ್ ತಿಂಗಳ ವೇತನ ಪಡೆಯುವ ಸಂಭವವಿಲ್ಲ.

ಎಪ್ರಿಲ್ 2006ರಲ್ಲಿ ಸರಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೂ 200 ವಿಶೇಷ ಭತ್ಯೆ ಘೋಷಿಸಿದ್ದರೆ, ಈ ಭತ್ಯೆಯನ್ನು ಮುಂದೆ ಏರಿಸಿ ಪ್ರಾಥಮಿಕ ಶಿಕ್ಷಕರಿಗೆ ರೂ 300, ಮಾಧ್ಯಮಿಕ ಹಾಗೂ ಪಿಯುಸಿ ಶಿಕ್ಷಕರಿಗೆ ಕ್ರಮವಾಗಿ ರೂ 400 ಹಾಗೂ ರೂ 500 ಎಂದು ನಿಗದಿ ಪಡಿಸಲಾಗಿತ್ತು. ಪ್ರಾಥಮಿಕ ಶಾಲಾ ಶಿಕ್ಷಕರ ಭತ್ಯೆಯನ್ನು 2008ರಲ್ಲಿಯೇ ರದ್ದು ಪಡಿಸಲಾಗಿದ್ದರೆ ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಕರ ಭತ್ಯೆಗಳನ್ನು 2014ರಲ್ಲಿ ರದ್ದು ಪಡಿಸಲಾಗಿದೆ. ರದ್ದುಪಡಿಸಲಾದ ಭತ್ಯೆಯನ್ನು ಶಿಕ್ಷಕರು ಈಗಲೂ ಪಡೆಯುತ್ತಿರುವ ಬಗ್ಗೆ ಸಿಎಜಿ ವರದಿ ಆಕ್ಷೇಪಿಸಿತ್ತಲ್ಲದೆ ಅದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ದೂರಿತ್ತು.

ಈ ರೀತಿ ರದ್ದುಗೊಂಡ ಹೊರತಾಗಿಯೂ ಶಿಕ್ಷಕರು ಭತ್ಯೆ ಪಡೆಯುತ್ತಿದ್ದುರಿಂದ 1,557 ಪ್ರಾಥಮಿಕ ಶಾಲಾ ಶಿಕ್ಷಕರು ರೂ 127 ಲಕ್ಷ ಹಣ ಸರಕಾರಕ್ಕೆ ಹಿಂದಿರುಗಿಸಬೇಕಾದಂತಾಗಿದೆ. ಈ ಹಣವನ್ನು ಈಗ ಅವರ ವೇತನದಲ್ಲಿ ಸರಿದೂಗಿಸಲು ನಿರ್ಧರಿಸಿರುವುದರಿಂದ ಶಿಕ್ಷಕರು ಕಂಗಾಲಾಗಿದ್ದಾರೆ. ಈ ನಿರ್ಧಾರದಿಂದ ಹೆಚ್ಚಾಗಿ ಬಳ್ಳಾರಿ, ಬೆಳಗಾವಿ, ತುಮಕೂರು, ಹಾಸನ, ಮಂಡ್ಯ, ಬೀದರ್, ದಾವಣಗೆರೆಯ ಶಿಕ್ಷಕರು ಬಾಧಿತರಾಗುತ್ತಾರೆ.