ಗಾಂಧಿ ಕೊಂದ ಪಕ್ಷದವರಿಂದ ಉಪದೇಶ ಬೇಕಿಲ್ಲ : ಸೀಎಂ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ `ಕೊಳಚೆಗೇರಿ ವಾಸ್ತವ್ಯ’ ಚುನಾವಣಾ ಗಿಮಿಕ್ಸ್ ಎಂದು ಸೀಎಂ ಸಿದ್ದರಾಮಯ್ಯ ನೇರಾನೇರ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಮಾಜಿ ಸೀಎಂ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರ ಜೊತೆಯಲ್ಲಿ ಮಾತನಾಡಿದ ಸೀಎಂ, “ಇಂತಹ ರಾಜಕೀಯ ತಂತ್ರಗಾರಿಕೆ ಮೂಲಕ ಮತದಾರರನ್ನು ಮೋಸಗೊಳಿಸಲು ಬಿಜೆಪಿಗೆ ಸಾಧ್ಯವಿಲ್ಲ. ಮತದಾರರು ಬುದ್ಧಿವಂತರಾಗಿದ್ದಾರೆ” ಎಂದರು.

“ಸೀಎಂ ಆಗಿದ್ದಾಗ ಯಡ್ಯೂರಪ್ಪ ಎಷ್ಟು ಬಾರಿ ಕೊಳಚೆಗೇರಿಯಲ್ಲಿ ಮಲಗಿದ್ದರು ? ಆಗ ಅವರಿಗೆ ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ಮಂದಿ ಬೇಕಿತ್ತೇ ? ಬಿಜೆಪಿ ನಾಯಕರು ಚುನಾವಣೆ ಬಂದಾಗಲೆಲ್ಲ ಅನಗತ್ಯ ಕೀಳು ಮಟ್ಟದ ರಾಜಕೀಯ ಗಿಮಿಕ್ಸ್ ಮಾಡುತ್ತಾರೆ. ಆದರೆ ಬಿಜೆಪಿಗರು ಕೊಳೆಗೇರಿ ನಿವಾಸಿಗರು, ಅಲ್ಪಸಂಖ್ಯಾತರು ಮತ್ತು ದಲಿತರ ಅಭಿವೃದ್ಧಿ ವಿರೋಧಿಗಳೆಂದು ಎಲ್ಲರಿಗೂ ಗೊತ್ತಿದೆ” ಎಂದು ಸಿದ್ದರಾಮಯ್ಯ ಹೇಳಿದರು.

“ಚುನಾವಣೆ ಹೊತ್ತಿನಲ್ಲಿ ಬಿಜೆಪಿ ನಾಯಕರು ಕೇಂದ್ರದ ಐಟಿ, ಇಡಿ ಹಾಗೂ ಸಿಬಿಐಯಂತಹ ಸರ್ಕಾರಿ ಏಜೆನ್ಸಿಗಳ ಸಹಾಯ ಪಡೆದು ಕಾಂಗ್ರೆಸ್ ನಾಯಕರ ವಿರುದ್ಧ ದಾಳಿಗೆ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ಸಿಗೆ ಸಹಾಯ ಮಾಡುವವರ ವಿರುದ್ಧ ಬಿಜೆಪಿ ದ್ವೇಷ ರಾಜಕೀಯ ನಡೆಸುತ್ತಿದೆ. ಹಲವು ಬಾರಿ ಕಾಂಗ್ರೆಸ್ ಆಡಳಿತ ನಡೆಸಿದ್ದರೂ, ಯಾವತ್ತೂ ವಿಪಕ್ಷಗಳನ್ನು ಬಗ್ಗುಬಡಿಯಲು ಯಾವತ್ತೂ ಸಿಬಿಐ ಅಥವಾ ಇತರ ಯಾವುದೇ ಸರ್ಕಾರಿ ಏಜೆನ್ಸಿ ಬಳಸಿಕೊಂಡಿಲ್ಲ. ಬಿಜೆಪಿಯಷ್ಟು ಕುಲಗೆಟ್ಟ ರಾಜಕೀಯ ಪಕ್ಷ ಬೇರೊಂದಿಲ್ಲ” ಎಂದು ಸೀಎಂ ಟೀಕಿಸಿದರು.

ಬಿಜೆಪಿ ಕೋಮುವಾದಿ ಅಜೆಂಡಾದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, “ಮಹಾತ್ಮಾ ಗಾಂಧಿ ಕೊಲೆಗೈದ ಪಕ್ಷ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ. ಮುಸ್ಲಿಮರನ್ನು ದೇಶದಿಂದ ಹೊರದಬ್ಬಲು ಪ್ರಯತ್ನಿಸುತ್ತಿರುವ ಪಕ್ಷ ಬಿಜೆಪಿ” ಎಂದು ಗುಡುಗಿದರು.

LEAVE A REPLY