ಉಡುಪಿಯಲ್ಲಿ ನಕ್ಸಲ್ ಚಟುವಟಿಕೆ ಇಲ್ಲ

ಎಸ್ಪಿ ನಿಂಬರ್ಗಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ನಕ್ಸಲರ ಚಲನವಲನ, ಚಟುವಟಿಕೆ ಇಲ್ಲ ಎಂದು ನಿನ್ನೆ ಜಿಲ್ಲಾ ಪೊಲೀಸ್ ಕಚೇರಿ ಮೂಲಕ ಆಯೋಜಿಸಲಾಗಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕ (ಎಸ್ಪಿ) ಲಕ್ಷ್ಮಣ್ ನಿಂಬರ್ಗಿ ಹೇಳಿದರು.

“ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ಪೊಲೀಸರು ಜನರೊಂದಿಗೆ ನಿರಂತರ ಸಭೆ ಏರ್ಪಡಿಸಿ, ನಕ್ಸಲ್ ಚಟುವಟಿಕೆ ತಿಳಿದುಕೊಳ್ಳಲು ಪ್ರಯತ್ನಿಸುತಿದ್ದಾರೆ. ನಕ್ಸಲ್ ವಿರುದ್ಧ ಕಾರ್ಯಾಚರಣೆಗೆ ಜೆದ್ದಿನಗಡ್ಡೆ, ಶಂಕರನಾರಾಯಣ, ಹೆಬ್ರಿ ಮತ್ತು ಕಾರ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ನಾಲ್ಕು ಕ್ಯಾಂಪ್ ಇದೆ. ಜೊತೆಗೆ ನಕ್ಸಲ್ ನಿಗ್ರಹ ವಿಶೇಷ ಪಡೆಯೊಂದು ಇದೆ” ಎಂದವರು ತಿಳಿಸಿದರು.

“ಈ ಪೊಲೀಸ್ ಪಡೆಗಳು ಆಯಾ ಪ್ರದೇಶದಲ್ಲಿ ನಕ್ಸಲರ ಮೇಲೆ ಕಣ್ಣಿಟ್ಟಿವೆ. ನಕ್ಸಲ್ ಪೀಡಿತ ಎಂದು ಗುರುತಿಸಲ್ಪಟ್ಟಿರುವ ಪ್ರದೇಶದಲ್ಲಿ ಆಗಾಗ್ಗೆ ಕೂಂಬಿಗ್ ಅಪರೇಶನ್ ನಡೆಯುತ್ತಿದೆ. ಹಾಗಾಗಿ ಇಲ್ಲಿ ಇದುವರೆಗೆ ನಕ್ಸಲ್ ಚಲನವಲನ 4ನೇ ಕಂಡುಬಂದಿಲ್ಲ” ಎಂದು ಎಸ್ಪಿ ಹೇಳಿದರು.

“ಅಸೆಂಬ್ಲಿ ಚುನಾವಣೆ ಸನ್ನಿಹಿತವಾಗುತ್ತಿದ್ದು, ಜಿಲ್ಲೆಯಲ್ಲಿ ನಕ್ಸಲರ ಹಾವಳಿ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಚುನಾವಣೆಯ ಸಂದರ್ಭದಲ್ಲಿ ನಕ್ಸಲರು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿದ್ದುಂಟು. ಜಿಲ್ಲೆಯಲ್ಲಿ 3,850 ಮಂದಿ ಸಶಸ್ತ್ರ ಲೈಸೆನ್ಸ್ ಹೊಂದಿದ್ದು, ಇವುಗಳ ಪರಿಶೀಲನೆ ನಡೆಯುತ್ತಿದೆ” ಎಂದು ನಿಂಬರ್ಗಿ ವಿವರಿಸಿದರು.

 

LEAVE A REPLY