`ಯಾವುದೇ ಸರಕಾರ ಬಂದರೂ ಎತ್ತಿನಹೊಳೆ ಸ್ಥಗಿತ ಸಾಧ್ಯವಿಲ್ಲ’

ರಮಾನಾಥ ರೈ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ನೇತ್ರಾವತಿ ನದಿ ತಿರುಗಿಸುವ ಯೋಜನೆಯನ್ನು ಇನ್ಮುಂದೆ ನಿಲ್ಲಿಸಲು ಸಾಧ್ಯವೇ ಇಲ್ಲ. ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಎತ್ತಿನಹೊಳೆ ಯೋಜನೆ ನಿಲ್ಲದು” ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಈ ಯೋಜನೆಯ ಮೂಲ ಕಾರಣಕರ್ತರು ಬಿಜೆಪಿಗರು. ಆದರೆ ಇದೀಗ ಈ ಯೋಜನೆಯನ್ನು ಕಾಂಗ್ರೆಸ್ ಜಾರಿಗೆ ತರಲು ಹವಣಿಸುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಬಿಜೆಪಿ ಸರಕಾರವಿದ್ದಾಗಲೇ ಇದಕ್ಕೆ ರೂಪುರೇಷೆ ಹೆಣೆಯಲಾಗಿತ್ತು. ಅದನ್ನು ಕೇವಲ ಕಾಂಗ್ರೆಸ್ ಸರಕಾರ ಮುಂದುವರಿಸುತ್ತಿದೆ. ಎತ್ತಿನಹೊಳೆ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಈಗಾಗಲೇ ತಜ್ಞರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚರ್ಚೆ ನಡೆಸಿದ್ದಾರೆ. ಯೋಜನೆ ವಿರುದ್ಧದ ಹೊರಾಟಗಾರರಿಗೂ ಇತ್ತೀಚೆಗೆ ಬೆಂಗಳೂರಿನಲ್ಲಿ ಕರೆಯಲಾದ ಸಭೆಯಲ್ಲಿ ವಿಚಾರವನ್ನು ಮನವರಿಕೆ ಮಾಡಿಕೊಡಲಾಗಿದೆ” ಎಂದರು.

ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಇಲಾಖಾ ಸಚಿವ ಅನಿಲ್ ಮಾಧವ ಧವೆ ಕೆಲ ದಿನಗಳ ಹಿಂದೆ ಎತ್ತಿನಹೊಳೆ ಯೋಜನೆಗೆ ಸರಕಾರ ಅನುಮತಿ ಕೊಟ್ಟಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ, “ಹಾಗಿದ್ದರೆ ಮಾದವ ಅವರು ಈ ಯೋಜನೆಯನ್ನು ನಿಲ್ಲಿಸಿಬಿಡಲಿ” ಎಂದರು.