ಇನ್ನು ಉಚಿತ ರೇಶನ್ ಇಲ್ಲ : ಪ್ರತೀ ಕಿಲೋ ಧಾನ್ಯಕ್ಕೆ 1 ರೂ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪಡಿತರ ಅಂಗಡಿಗಳನ್ನು ಮುಚ್ಚಿ ಪಡಿತರ ಅಂಗಡಿ ವ್ಯಾಪಾರಿಗಳು ಆರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರ ಹಿಂತೆಗೆದುಕೊಳ್ಳಲಾಗಿದ್ದು, ಪಡಿತರ ಅಂಗಡಿಗಳು ಎಂದಿನಂತೆ ಕಾರ್ಯಾಚರಿಸತೊಡಗಿದೆ.

ಪಡಿತರ ವ್ಯಾಪಾರಿ ಸಂಘಟನೆಗಳು ಸರಕಾರದ ಮುಂದಿರಿಸಿರುವ ಬೇಡಿಕೆಗಳ ಪೈಕಿ ಬಹುತೇಕ ಬೇಡಿಕೆಗಳನ್ನು ರಾಜ್ಯ ಸಚಿವ ಸಂಪುಟ ಸಭೆ ಅಂಗೀಕರಿಸಿದೆ. ಪಡಿತರ ಚಿಲ್ಲರೆ ವ್ಯಾಪಾರಿಗಳಿಗೆ ಪ್ರತೀ ತಿಂಗಳೂ ಕನಿಷ್ಠ 16 ಸಾವಿರ ರೂ ವೇತನ ಖಾತರಿ ಪ್ಯಾಕೇಜಿಗೂ ಸರಕಾರ ಅಂಗೀಕರಿಸಿದ ತೀರ್ಮಾನದಂತೆ ಪಡಿತರ ಆದ್ಯತಾ ವಿಭಾಗ ಯಾದಿಯಲ್ಲಿರುವವರಿಗೆ ಈಗ ಉಚಿತವಾಗಿ ಲಭಿಸುವ ಪಡಿತರ ಧಾನ್ಯಗಳಿಗೆ ಇನ್ನು ಪ್ರತೀ ಕಿಲೋ ಧಾನ್ಯಗಳಿಗೆ ತಲಾ ಒಂದು ರೂ ನೀಡಬೇಕಾಗಿದೆ.

ಆದ್ಯತಾ ವಿಭಾಗಕ್ಕೆ ಸೇರಿದ (ಪಿಂಕ್ ವಿಭಾಗಕ್ಕೆ ಸೇರಿದ ಮಾಲಕರಿಗೆ) ವಿಭಾಗಕ್ಕೆ ಸೇರಿದ 29.06 ಲಕ್ಷ ಜನರಿಗೆ ಈಗ ಉಚಿತವಾಗಿ ರೇಶನ್ ಧಾನ್ಯ ಲಭಿಸುತ್ತಿದೆ. ಇನ್ನು ಹೀಗೆ ಲಭಿಸುವ ಪ್ರತೀ ಒಂದು ಕಿಲೋ ಧಾನ್ಯಕ್ಕೆ ತಲಾ ಒಂದು ರೂ ನೀಡಬೇಕಾಗುವುದು.

ಅಂದರೆ ಈಗ ಈ ವಿಭಾಗಕ್ಕೆ ಸೇರಿದ ಕಾರ್ಡುಗಳ ಪ್ರತೀ ಸದಸ್ಯರು ರೇಶನ್ ಲಭಿಸಲು ಇನ್ನು ಐದು ರೂ(ನಾಲ್ಕು ಕಿಲೋ ಅಕ್ಕಿಗೆ ತಲಾ 1 ರೂ)ನಂತೆ (1 ಕಿಲೋ ಗೋಧಿಗೆ 1 ರೂ) ನೀಡಬೇಕಾಗಿದೆ. ಆ ಮೂಲಕ ಈ ವಿಭಾಗದವರಿಗೆ ಈ ತನಕ ಲಭಿಸುತ್ತಿದ್ದ ಉಚಿತ ರೇಶನ್ ಪೂರೈಕೆ ನಿಲುಗಡೆಗೊಳ್ಳಲಿದೆ.

ಈ ವತಿಯಿಂದ ಸರಕಾರಕ್ಕೆ 117.4 ಕೋಟಿ ರೂ ಲಭಿಸಲಿದೆ. ಆದರೆ ಅಂತ್ಯೋದಯ ಅನ್ನಯೋಜನೆ ವಿಭಾಗಕ್ಕೆ ಸೇರಿದ ಕಾರ್ಡುದಾರರು ಈ ಹಣ ನೀಡಬೇಕಾಗಿಲ್ಲ. ಅವರಿಗೆ ಈಗಿರುವ ಅದೇ ರೀತಿಯಲ್ಲಿ ಉಚಿತವಾಗಿ ರೇಶನ್ ಲಭಿಸಲಿದೆ.

ರೇಶನ್ ವ್ಯಾಪಾರಿಗಳಿಗೆ ನೀಡಲಾಗುತ್ತಿರುವ ಕಮಿಷನ್ ಮೊತ್ತವನ್ನು 100 ರೂ.ನಿಂದ 220 ರೂ.ಗೇರಿಸಲಾಗಿದೆ. ರೇಶನ್ ಕಲ್ಯಾಣ ನಿಧಿ ಸವಲತ್ತುಗಳನ್ನು ಹೆಚ್ಚಿಸಲು ಮತ್ತು ವಿಮಾ ಪ್ಯಾಕೇಜ್ ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಸರಕಾರ ಅಂಗೀಕರಿಸಿದೆ.

ಸರಕಾರ ಹಲವು ವರ್ಷಗಳ ನಿರೀಕ್ಷೆಯ ಬಳಿಕ ಇದೀಗ ವಿತರಿಸಿರುವ ನೂತನ ಪಡಿತರ ಚೀಟಿಯಲ್ಲಿ ವ್ಯಾಪಕ ತಪ್ಪುಗಳು ಕಂಡುಬಂದಿದ್ದು, ಅವನ್ನು ಸರಿಪಡಿಸುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಪ್ರಕಟಣೆಯನ್ನು ಸರಕಾರ ಹೊರಡಿಸಿಲ್ಲ. ಜೊತೆಗೆ ಈ ಹಿಂದಿನ ಯುಡಿಎಫ್ ಸರಕಾರ ಅಂದು ಕೇಂದ್ರಕ್ಕೆ ನೀಡಬೇಕಿದ್ದ ಆಹಾರ ಭದ್ರತಾ ಕಾಯ್ದೆಯ ನೀತಿ ನಿಯಮಗಳನುಸಾರ ಸ್ಪಂದಿಸದಿರುವುದರಿಂದ ಮತ್ತು ಭಾರೀ ಮೊತ್ತದ ಸಾಲ ಕೇಂದ್ರಕ್ಕೆ ನೀಡಲು ಬಾಕಿಯಿರುವುದರಿಂದ ಪಡಿತರ ವ್ಯವಸ್ಥೆ ರಾಜ್ಯಾದ್ಯಂತ ಅಲ್ಲೋಲಕಲ್ಲೋಲವಾಗಿದ್ದು, ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ. ಅದನ್ನು ಸರಿಪಡಿಸಿ ಹಳಿಗೆ ತರುವ ಯತ್ನವನ್ನು ರಾಜ್ಯ ಸರಕಾರ ಮರೆತಂತೆ ಕಾಣಿಸುತ್ತಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗುತ್ತಿದೆ.