ಇಂಗ್ಲೆಂಡ್, ಜರ್ಮನಿ, ಇಟಲಿಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಇಲ್ಲ

ಆಮ್ ಆದ್ಮಿ ಪಕ್ಷ ಪ್ರಸ್ತುತಪಡಿಸಿರುವ ಪ್ರಾತ್ಯಕ್ಷಿಕೆಯನ್ನು ನೋಡಿದರೆ ಮತಯಂತ್ರಗಳನ್ನು ಮತಗಟ್ಟೆಯಲ್ಲೇ ದುರ್ಬಳಕೆ ಮಾಡಬಹುದಾಗಿದೆ.

ಭಾರತದ ಚುನಾವಣಾ ವ್ಯವಸ್ಥೆಯನ್ನು ಪಾರದರ್ಶಕವನ್ನಾಗಿ ಮಾಡುವ ದೃಷ್ಟಿಯಿಂದ ಬಳಸಲಾಗುತ್ತಿರುವ ವಿದ್ಯುನ್ಮಾನ ಮತ ಯಂತ್ರಗಳನ್ನು ದುರ್ಬಳಕೆ ಮಾಡಬಹುದು ಎಂದು ಹಲವು ರಾಜಕೀಯ ಪಕ್ಷಗಳು ಆರೋಪಿಸುತ್ತಿವೆ.  ಪ್ರಜಾತಂತ್ರ ವ್ಯವಸ್ಥೆಯ ತಳಹದಿಯನ್ನೇ ಬುಡಮೇಲು ಮಾಡುವಂತಹ ಇಂತಹ ವಿದ್ಯಮಾನ ಸಹಜವಾಗಿಯೇ ವಿವಾದಾಸ್ಪದವಾಗಿದೆ. ಮತಯಂತ್ರಗಳ ದುರ್ಬಳಕೆಯ ಆರೋಪ ಜನಸಾಮಾನ್ಯರನ್ನೂ ಕಂಗೆಡಿಸಿದ್ದು ಚುನಾವಣೆಗಳಲ್ಲಿ ಮತಯಂತ್ರ ಬಳಕೆಯ ಹೊರತಾಗಿಯೂ ಮೋಸ ವಂಚನೆ ನಡೆಯುತ್ತದೆಯೇ ಎಂಬ ಅನುಮಾನ ಜನರನ್ನು ಕಾಡತೊಡಗಿದೆ.

ವಿಶ್ವದ ಹಲವು ಮುಂದುವರಿದ ರಾಷ್ಟ್ರಗಳಲ್ಲಿ – ಜರ್ಮನಿ, ನೆದರ್‍ಲೆಂಡ್, ಇಟಲಿ, ಇಂಗ್ಲೆಂಡಿನಲ್ಲಿ – ವಿದ್ಯುನ್ಮಾನ ಮತಯಂತ್ರಗಳನ್ನು ನಿಷೇಧಿಸಲಾಗಿದೆ. ಬಿಜೆಪಿ ಸದಸ್ಯ ಸುಬ್ರಮಣ್ಯಸ್ವಾಮಿ ಹೇಳುವಂತೆ ಹಲವು ದೇಶಗಳಲ್ಲಿ ಮತಯಂತ್ರಗಳ ಕಾರ್ಯದಕ್ಷತೆ  ಮತ್ತು ಪಾರದರ್ಶಕತೆಯ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಇದರೊಡನೆ ಪೇಪರ್ ಬಳಸಲು ನಿರ್ಧರಿಸಲಾಗಿದೆ. ಮತಯಂತ್ರಗಳ ವಿಶ್ವಾಸಾರ್ಹತೆ ಮತ್ತು ಸುಭದ್ರತೆಯನ್ನೂ ಸಹ ಪ್ರಶ್ನಿಸಲಾಗಿದೆ.

ನೆದರ್‍ಲೆಂಡ್ ಸರ್ಕಾರ 2006ರಲ್ಲೇ ಮತಯಂತ್ರದ ಬಳಕೆಯನ್ನು ನಿಷೇಧಿಸಿತ್ತು. 2009ರಲ್ಲಿ ಐರ್ಲೆಂಡ್ ಗಣರಾಜ್ಯ ಇದರ ಬಳಕೆಯನ್ನು ನಿಷೇಧಿಸಿತು. ಮಾರ್ಚ್ 2009ರಲ್ಲಿ ಜರ್ಮನಿಯ

ಸುಪ್ರೀಂಕೋರ್ಟ್ ಮತಯಂತ್ರ ಬಳಕೆಯನ್ನು ನಿಷೇಧಿಸಿತ್ತು. ಇಂಗ್ಲೆಂಡ್ ಮತ್ತು ಫ್ರಾನ್ಸಿನಲ್ಲಿ ಈ ಯಂತ್ರದ ಬಳಕೆ ಮಾಡಿಯೇ ಇಲ್ಲ.

ಭಾರತದಲ್ಲಿ ಬಳಸಲ್ಪಡುವ ಮತಯಂತ್ರಗಳ ವೈಶಿಷ್ಟ್ಯವೆಂದರೆ ಇವುಗಳನ್ನು ಬ್ಲೂಟೂತ್ ಅಥವಾ ಅಂತರ್ಜಾಲ ಸಂಪರ್ಕದ ಮೂಲಕ ದುರ್ಬಳಕೆ ಮಾಡಲಾಗುವುದಿಲ್ಲ. ಇತರ ಯಂತ್ರಗಳಿಂದ ಮತಯಂತ್ರವನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಆದರೆ ಆಮ್ ಆದ್ಮಿ ಪಕ್ಷ ಪ್ರಸ್ತುತಪಡಿಸಿರುವ ಪ್ರಾತ್ಯಕ್ಷಿಕೆಯನ್ನು ನೋಡಿದರೆ ಮತಯಂತ್ರಗಳನ್ನು ಮತಗಟ್ಟೆಯಲ್ಲೇ ದುರ್ಬಳಕೆ ಮಾಡಬಹುದಾಗಿದೆ.

ವಿದ್ಯುನ್ಮಾನ ಮತಯಂತ್ರದ ವಿವಾದ ಇತ್ತೀಚಿನದೇನಲ್ಲ. 2009ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗಲೇ ಆಗ ಬಿಜೆಪಿಯ ಸದಸ್ಯತ್ವವನ್ನು ಹೊಂದಿರದಿದ್ದ ಸುಬ್ರಮಣ್ಯಸ್ವಾಮಿ  ಮತಯಂತ್ರಗಳ ಬಗ್ಗೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದ್ದರು.