ಬೀದಿನಾಯಿ ಕಚ್ಚಿದ ಪ್ರಕರಣ ಶೂನ್ಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ನಗರದಲ್ಲಿ ಬೀದಿ ನಾಯಿಗಳ ಕಾಟ ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ಕಾಡುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದುವರೆಗೆ ಸಾರ್ವಜನಿಕರಿಗೆ ಬೀದಿ ನಾಯಿ ಕಚ್ಚಿದ ಉದಾಹರಣೆಗಳಿಲ್ಲ. ಮಂಗಳೂರು ನಗರ ಪಾಲಿಕೆಯು ಕೂಡಾ ಶ್ವಾನಗಳ ಸಂತಾನಹರಣ ಚಿಕಿತ್ಸೆ, ಕಾಲಕಾಲಕ್ಕೆ ರೋಗನಿರೋಧಕಗಳನ್ನು ನೀಡುವ ಮೂಲಕ ಬೀದಿನಾಯಿಗಳ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ.

ಮಂಗಳೂರು ನಗರ ಪಾಲಿಕೆಯಿಂದ ಶ್ವಾನಗಳ ನಿರ್ವಹಣೆಯನ್ನು ಮಾಡುತ್ತಿರುವ ಆ್ಯನಿಮಲ್ ಕೇರ್ ಟ್ಟಸ್ಟಿ(ಎಸಿಟಿ)ನಲ್ಲಿ ಇದುವರೆಗೆ ಸಾರ್ವಜನಿಕರಿಗೆ ನಾಯಿ ಕಚ್ಚಿದ ಅಥವಾ ನಾಯಿ ಕಚ್ಚಿ ರೇಬಿಸ್ ದಾಖಲಾದ ಪ್ರಕರಣ ಇಲ್ಲ. ಇದಕ್ಕೆ ಕಾಲಕಾಲಕ್ಕೆ ಚುಚ್ಚು ಮದ್ದು ನೀಡುತ್ತಿರುವುದು ಕೂಡಾ ಕಾರಣವಾಗಿದೆ.

ನಗರದ 60 ವಾರ್ಡುಗಳಲ್ಲೂ ಬೀದಿನಾಯಿಗಳ ನಿರ್ವಹಣೆಯನ್ನು ಮಾಡಲಾಗುತ್ತಿದ್ದು, ಇದುವರೆಗೆ ಬೀದಿ ನಾಯಿಗಳು ಯಾರಿಗೂ ಕಚ್ಚಿಲ್ಲ. ಎಸಿಟಿ ಕಾಲಕಾಲಕ್ಕೆ ಬೀದಿನಾಯಿಗಳಿಗೆ ಚುಚ್ಚುಮದ್ದು ನೀಡುತ್ತಿದೆ. ಕಳೆದ ಹಲವು ವರ್ಷಗಳಿಂದ ಬೀದಿನಾಯಿಗಳ ನಿರ್ವಹಣೆ ಚೆನ್ನಾಗಿದೆ ಎಂದು ಟ್ರಸ್ಟಿ ಸುಮಾ ರಮೇಶ್ ಹೇಳಿದ್ದಾರೆ. ಬೀದಿನಾಯಿಗಳ ಹಾವಳಿ, ಸಂತತಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದ್ದು, ರೇಬಿಸ್ ಪ್ರಕರಣಗಳು ಕೂಡಾ ಶೂನ್ಯವಾಗಿದೆ ಎಂದಿದ್ದಾರೆ.

ನಮ್ಮ ಕೆಲವೊಂದು ವರ್ತನೆಗಳು ನಾಯಿ ನಮಗೆ ಕಚ್ಚಲು ಕಾರಣವಾಗುತ್ತದೆ ಎಂದು ಶ್ವಾನ ತರಬೇತುದಾರ ನೆಕ್ಕಿಲಾಡಿ ವಿಶ್ವನಾಥ್ ಎಸ್ ಕೆ ಹೇಳುತ್ತಾರೆ.