ಬಂಟ್ವಾಳದ ಬ್ಯಾಂಕುಗಳಲ್ಲಿ `ನೋ ಕ್ಯಾಶ್ ಬೋರ್ಡ್’

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಕೇಂದ್ರ ಸರಕಾರದ 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯ ಕ್ರಮದ ಬಳಿಕ ಜನ ಸಾಮಾನ್ಯರ ಪರದಾಟ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಕೆಲವರು ಇದೊಂದು ಉತ್ತಮ ಬೆಳವಣಿಗೆ, ಎಲ್ಲಿಯೂ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದರೂ ಜನ ಮಾತ್ರ ನಿತ್ಯ ಬ್ಯಾಂಕಿಗೆ ತೆರಳಿ ಸರತಿಯಲ್ಲಿ ನಿಂತು ಪರದಾಡುತ್ತಲೇ ಇದ್ದಾರೆ.

ಶನಿವಾರವೂ ತಾಲೂಕಿನ ಬಹುತೇಕ ಬ್ಯಾಂಕುಗಳಲ್ಲಿ ನಗದು ಪೂರೈಕೆಯಿಲ್ಲದೆ ವಹಿವಾಟು ಅಸ್ತವ್ಯಸ್ತಗೊಂಡಿತ್ತು. ಕೆಲ ಬ್ಯಾಂಕುಗಳಂತೂ `ಈ ದಿನ ಕ್ಯಾಶ್ ಇಲ್ಲ’ ಎಂಬ ನಾಮಫಲಕ ಬ್ಯಾಂಕಿನ ಹೊರಗಡೆ ಅಳವಡಿಸಿ ಜನರನ್ನು ಹೊರಗಿನಿಂದಲೇ ಕಳುಹಿಸುವ ಪ್ರಯತ್ನ ನಡೆಸಿರುವುದು ಕಂಡುಬಂತು. ಎಟಿಎಂಗಳಲ್ಲೂ ನಗದು ಇಲ್ಲದೆ ಸಾರ್ವಜನಿಕರು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಕಂಡು ಬರುತ್ತಲೇ ಇದೆ. ನೋಟು ಅಮಾನ್ಯಗೊಂಡು ತಿಂಗಳಾಗುತ್ತಾ ಬಂದರೂ ಇನ್ನೂ ಕೊಂಚವೂ ಪರಿಸ್ಥಿತಿ ಸುಧಾರಿಸಿದಂತೆ ಕಂಡು ಬರುತ್ತಿಲ್ಲ. ಕಪ್ಪು ಹಣವೂ ಹೊರಗೆ ಬರುತ್ತಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣವೂ ಬಿದ್ದಿಲ್ಲ. ಪರದಾಡುವ ಸರದಿ ಮಾತ್ರ ಬಡ ಸಾರ್ವಜನಿಕರ ಪಾಲಿಗೆ ಒದಗಿ ಬಂದಿದೆಯಷ್ಟೆ ಎಂದು ಜನ ಹೇಳುತ್ತಿದ್ದಾರೆ.