ಕರಾವಳಿಯ ಮೂರು ಜಿಲ್ಲೆಯಲ್ಲಿ ಉತ್ತರ ಕರ್ನಾಟಕದ ಮೆಣಸು ಭರ್ಜರಿ ಮಾರಾಟ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಮಾಲ್ ಮತ್ತು ಮಾರುಕಟ್ಟೆಗಳಿಗೆ ಹೊರರಾಜ್ಯಗಳ ಹಣ್ಣು ತರಕಾರಿಗಳು ಪ್ರವೇಶಿಸುವಂತೆ ಕರಾವಳಿ ಪ್ರದೇಶಗಳಿಗೆ ಉತ್ತರ ಕರ್ನಾಟಕದ ಮೆಣಸಿನ ರಾಶಿಗಳು ಲಗ್ಗೆಯಿಟ್ಟಿವೆ.

ಪ್ರಸಕ್ತ ನಗರದ ಕದ್ರಿಯಲ್ಲಿ ಮೆಣಸಿನ ದೊಡ್ಡ ಪ್ರಮಾಣದ ರಾಶಿಗಳನ್ನು ಕಾಣಬಹುದು. ವಿವಿಧ ರೀತಿಯ ಒಣಮೆಣಸುಗಳನ್ನು ಸಾಲಾಗಿ ಜೋಡಿಸಲಾಗಿದ್ದು, ಒಂದು ರೀತಿಯ ಮಾರುಕಟ್ಟೆ ರೂಪವನ್ನು ಕಾಣಬಹುದು. ವಾರಾಂತ್ಯದಲ್ಲಿ ಕೋಳಿ, ಮೀನು ಮತ್ತಿತರ ಮಾಂಸ ಖಾದ್ಯ ಮೆಲ್ಲುವ ಮಂಗಳೂರಿಗರು ಈ ಮೆಣಸಿನ ವ್ಯಾಪಾರಿಗಳಲ್ಲಿ ಸಾಕಷ್ಟು ಕಡಿಮೆ ಮೊತ್ತಕ್ಕೆ ಮೆಣಸು ಖರೀದಿಸಿ, ಖಾದ್ಯ ತಿನಿಸುಗಳಲ್ಲಿ ವಿಶೇಷ ತೃಪ್ತಿ ಕಾಣುತ್ತಿದ್ದಾರೆ.

ಈ ವ್ಯಾಪಾರಿಗಳಲ್ಲಿ ಮಂಗಳೂರನ್ನೇ ವ್ಯಾಪಾರಕ್ಕೆ ಯಾಕೆ ಆರಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದರೆ ಬಾಗಲಕೋಟೆ ವ್ಯಾಪಾರಿ ಹೇಳಿದ್ದು ಹೀಗೆ… “ಮಂಗಳೂರಿನಲ್ಲಿ ಮೆಣಸಿನ ಮಾರುಕಟ್ಟೆ ದರ ಕೇಜಿಗೆ 250. ಆದರೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕೇವಲ ರೂ 120 ಮಾತ್ರ ಪಡೆಯಲು ಸಾಧ್ಯ. 2016ರಲ್ಲಿ ಉತ್ತರ ಕರ್ನಾಟಕದಲ್ಲಿ ಬಂಪರ್ ಬೆಳೆ ಕಾಣಿಸಿಕೊಂಡದ್ದೇ ಇದಕ್ಕೆ ಕಾರಣ. ಪರಿಣಾಮ ಮೆಣಸಿನ ದರ ಕೇಜಿಗೆ 50ರಿಂದ 60ರವರೆಗೆ ಇಳಿಕೆಯಾಗಿದೆ. ಅದೇ ಮೆಣಸನ್ನು ಮಂಗಳೂರು ಮಾರುಕಟ್ಟೆಯಲ್ಲಿ ರೂ 240ಕ್ಕೆ ಮಾರಾಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಕಳೆದ ಎರಡು ವಾರಗಳಿಂದ ಈ ವ್ಯಾಪಾರಿಗಳು ಕದ್ರಿಯಲ್ಲಿ ಬೀಡುಬಿಟ್ಟಿದ್ದಾರೆ. ಬ್ರಹ್ಮಾವರ, ಕೋಟೇಶ್ವರ, ಭಟ್ಕಳ, ಕುಮಟಾ ಮತ್ತು ಕಾರವಾರಗಳಲ್ಲಿ ಬ್ಯಾಡಗಿ ಮತ್ತು ಕಡ್ಡಿ ಬ್ಯಾಡಗಿ ಎರಡೂ ವಿಧದ ಮೆಣಸುಗಳನ್ನು 21 ಟ್ರಕ್ಕುಗಳಿಗೆ ಕಡಿಮೆ ಇಲ್ಲದೆ ಮಾರಾಟ ಮಾಡಿರುವುದಾಗಿ ವ್ಯಾಪಾರಿಗಳು ಹೇಳಿದ್ದಾರೆ.

“ಈ ಮೆಣಸು ಮಸಾಲೆಗಳಿಗೆ ನೈಸರ್ಗಿಕ ಬಣ್ಣವನ್ನು ಕೊಡುತ್ತದೆ. ಮಸಾಲೆಗೆ ಕೃತಕ ಬಣ್ಣ ನೀಡುವ ಅವಶ್ಯಕತೆ ಇಲ್ಲ. ಈ ಮೆಣಸಿನ ಬಣ್ಣ ಮೀನು ಫ್ರೈ ಮತ್ತು ಮಸಾಲೆಗೆ ನೈಸರ್ಗಿಕ ಆಕರ್ಷಣೆಯನ್ನು ಕೊಡುತ್ತದೆ” ಎಂದು ಮೆಣಸನ್ನು ಬಳಸುತ್ತಿರುವ ಹೋಟೆಲ್ ಮಾಲಕರೊಬ್ಬರು ಹೇಳಿದ್ದಾರೆ.