ಕಪ್ಪುಹಣ ನಿಯಂತ್ರಣಕ್ಕೆ ಮಠಗಳಿಗೆ ಮೂಗುದಾರ

ಸರಕಾರದ ಕ್ರಮ ಸಮರ್ಥಿಸಿದ ನಿಡುಮಾಮಿಡಿ

ಕರಾವಳಿ ಅಲೆ  ವರದಿ

ಮೈಸೂರು : ಕಪ್ಪುಹಣದ ವ್ಯವಹಾರವನ್ನು ನಿಯಂತ್ರಿಸಲು ಮಠಗಳನ್ನು ಸರಕಾರದ ಸುಪರ್ದಿಗೆ ತರುವ ಕಾಯಿದೆ ಅಗತ್ಯವಿದ್ದು, ಕಾಯ್ದೆ ವಿಚಾರದಲ್ಲಿ ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ಪ್ರಗತಿಪರ ಮಠಾಧೀಶರ ವೇದಿಕೆ ಅಧ್ಯಕ್ಷ ನಿಡುಮಾಮಿಡಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿ ಪ್ರತಿಪಾದಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, “ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ಮಠ ಮಾನ್ಯಗಳ ವಿಚಾರದಲ್ಲಿ ಕಾಯ್ದೆ ರಚನೆಗೆ ಮುಂದಾಗಿರುವುದು ಸೂಕ್ತ ಕ್ರಮವಾಗಿದೆ. ಆದರೆ ಪ್ರತಿಪಕ್ಷದವರು ಇದನ್ನೇ

ಅಸ್ತ್ರವಾಗಿ ಬಳಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.

“ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ನಡೆದುಕೊಂಡಿದೆ. ಆದರೆ ಸುತ್ತೋಲೆಯಲ್ಲಿ ಏನಿದೆ ಎನ್ನುವುದನ್ನು ಸಂಪೂರ್ಣವಾಗಿ ಓದಬೇಕಿದೆ. ಆ ಸುತ್ತೋಲೆಯಲ್ಲಿ ಮಠಗಳನ್ನ ಸ್ವಾಧೀನಪಡಿಸಿಕೊಳ್ಳಬೇಕು ಅಂತ ಇಲ್ಲ. ಮಠಗಳನ್ನ ಮುಜರಾಯಿ ಇಲಾಖೆ ವ್ಯಾಪ್ತಿಗೆ ತಂದು ಆಡಳಿತ ನಡೆಸುವ ಬಗ್ಗೆ ಸಂಬಂಧಪಟ್ಟವರ ಅಭಿಪ್ರಾಯ ಕೇಳಲಾಗಿದೆ. ಆದರೆ, ಸುತ್ತೋಲೆಗೆ ಅಪಾರ್ಥ ಕಲ್ಪಿಸಿ ಪ್ರಚಾರ ಮಾಡಲಾಗಿದೆ” ಎಂದು ಸ್ವಾಮೀಜಿ ಹೇಳಿದರು.

“ಪ್ರಸ್ತಾವಿತ ಸಮೂದೆ ಬಗ್ಗೆ ಉಡುಪಿಯ ಪೇಜಾವರ ಶ್ರೀ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ  ಭಾವುಕರಾಗಿ ಹೇಳಿಕೆ ನೀಡಿದ್ದಾರೆ. ಸರಕಾರದ ಸದುದ್ದೇಶಗಳನ್ನು ಇವರು ಅರ್ಥ ಮಾಡಿಕೊಳ್ಳಲು ಮುಂದಾಗಿಲ್ಲ. ಇದನ್ನು ತಪ್ಪಾಗಿ ಗ್ರಹಿಸಿಕೊಂಡು ಪ್ರತಿಪಕ್ಷಗಳು ಕೂಡ ಅಪಪ್ರಚಾರ ಮಾಡಿವೆ” ಎಂದು ಹೇಳಿದರು.

“ಮಠ ಮಾನ್ಯಗಳಿಗೆ ಸರ್ಕಾರ ನೀಡುವ ಜಾಗ ಬೇಕು, ಸೌಲಭ್ಯ ಬೇಕು. ಆದ್ರೆ ಸರ್ಕಾರ ರೂಪಿಸುವ ನಿಯಮ ಪಾಲನೆ ಮಾತ್ರ ಬೇಡವೆಂದರೆ ಹೇಗೆ ? ವೃತ್ತಿಪರ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆ ನಡೆಸುವ ಶ್ರೀಮಂತ ಮಠಗಳಲ್ಲಿ ಕಪ್ಪು ಹಣ ಇದೆ. ಆ ಕಪ್ಪು ಹಣದ ನಿಯಂತ್ರಣಕ್ಕೆ ಈ ಕಾಯ್ದೆ ಜಾರಿಯಾಗಬೇಕಿದೆ. ರಾಜಕಾರಣಿಗಳಿಗೆ ಯಾವ ಮಠದ ಜೊತೆ ಹೆಚ್ಚಿನ ಸ್ನೇಹ ಇರುತ್ತೆ ಅಂತಹ ಮಠಗಳಲ್ಲಿ ಕಪ್ಪು ಹಣ ಇದೆ. ಸಾಮಾನ್ಯವಾಗಿ ಇಂತಹ ಮಠಗಳಿಗೆ ಈ ಕಾಯ್ದೆಯ ಅನಿವಾರ್ಯತೆ” ಎಂದು ನಿಡುಮಾಮಿಡಿ ಸ್ವಾಮಿ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಶ್ರೀಮಂತ ರಾಜಕಾರಣಿಗಳು ಮಠಗಳಲ್ಲಿ ಭಾರೀ ಪ್ರಮಾಣದ ಹಣದ ದಾಸ್ತಾನು ಮಾಡುವುದು, ಚುನಾವಣೆ ಮತ್ತು ಅಗತ್ಯ ಸಂದರ್ಭಗಳಲ್ಲಿ ಉಪಯೋಗಿಸಿಕೊಳ್ಳುವುದು ಹಲವು ದಶಕಗಳಿಂದ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನವಾಗಿರುವುದರಿಂದ ನಿಡುಮಾಮಿಡಿ ಎತ್ತಿರುವ ವಿಚಾರ ಕೂಡ ಸಮರ್ಥನೀಯವಾಗಿದೆ.

ಬಿಜೆಪಿ ಮುಖಂಡರು ಒಂದೆಡೆ ಕಪ್ಪು ಹಣದ ಬಗ್ಗೆ ಮಾತನಾಡಿ ಚುನಾವಣೆ ಗೆದ್ದ ಅನಂತರ ಅದನ್ನು ಮರೆತಿದ್ದಾರೆ. ರಾಜ್ಯ ಸರಕಾರ ಕಪ್ಪು ಹಣ ನಿಯಂತ್ರಣಕ್ಕೆ ಇಂತಹ ಕ್ರಮಕ್ಕೆ ಮುಂದಾದಾಗ ಜನರಲ್ಲಿ ತಪ್ಪು ಮಾಹಿತಿ ಹರಡಿ ರಾಜಕೀಯ ಲಾಭ ಮಾಡುತ್ತಿರುವುದು ಅದರ ಇಬ್ಬಂದಿ ನೀತಿಯನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

 

 

LEAVE A REPLY