ಯಾಸೀನ್ ಭಟ್ಕಳ ಸಹಿತ ಐವರ ಮರಣದಂಡನೆಗೆ ಎನ್ನೈಎ ಒತ್ತಾಯ

ಹೈದರಾಬಾದ್ : ಕಳೆದ ವಾರ ಹೈದರಾಬಾದ್ ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಘೋಷಿಸಲ್ಪಟ್ಟ 2013ರ ದಿಲ್ಕುಶ್ ನಗರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ನಿಷೇಧಿತ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥ ಯಾಸೀನ್ ಭಟ್ಕಳ್ ಸೇರಿದಂತೆ ಐದು ಮಂದಿಗೆ ಮರಣದಂಡನೆ ಶಿಕ್ಷೆ ದೊರೆಯುವಂತೆ ಮಾಡಲು ರಾಷ್ಟ್ರೀಯ ತನಿಖಾ ದಳ ಸರ್ವಪ್ರಯತ್ನ ನಡೆಸಲಿದೆ. ತಪ್ಪಿತಸ್ಥ ಉಗ್ರರಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇಂದು ಘೋಷಿಸಲಿದೆ.
ಫೆಬ್ರವರಿ 21,2013ರಂದು ನಗರದ ದಿಲ್ಕುಶ್ ನಗರ ಮಾರ್ಕೆಟ್ ಪ್ರದೇಶದಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಫೋಟಗಳಲ್ಲಿ ಗರ್ಭಿಣಿ ಮಹಿಳೆಯೊಬ್ಬಳೂ ಸೇರಿದಂತೆ 18 ಮಂದಿ ಮೃತರಾಗಿದ್ದರೆ, 131 ಜನ ಗಾಯಗೊಂಡಿದ್ದರು.
ಐಎಂ ಮುಖ್ಯಸ್ಥ ಯಾಸೀನ್ ಭಟ್ಕಳ್ ಮತ್ತಾತನ ಸಹಚರ ಅಸಾದುಲ್ಲಾ ಅಖ್ತರನನ್ನು ಆಗಸ್ಟ್ 2013ರಲ್ಲಿ ಭಾರತ-ನೇಪಾಳ ಗಡಿಯಿಂದ ಬಂಧಿಸುವ ಮೂಲಕ ರಾಷ್ಟ್ರೀಯ ತನಿಖಾ ದಳ ಈ ಸ್ಫೋಟ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿತ್ತು. ಅಸಾದುಲ್ಲಾ ಮತ್ತು ಈ ಪ್ರಕರಣದ ಇನ್ನೊಬ್ಬ ಆರೋಪಿ ತೆಹ್ಸೀನ್ ಅಖ್ತರ್ ಈ ಬಾಂಬ್ ಇಟ್ಟಿದ್ದರು ಎಂದು ತನಿಖಾ ವೇಳೆ ತಿಳಿದುಬಂದಿತ್ತಲ್ಲದೆ ಇನ್ನೊಬ್ಬ ಐಎಂ ನಾಯಕ ತಲೆಮರೆಸಿಕೊಂಡಿರುವ ರಿಯಾಝ್ ಭಟ್ಕಳ್ ಮತ್ತು ಬಂಧಿತ ಯಾಸೀನ್ ಭಟ್ಕಳ್ ಅವರಿಗೆ ಸೂಕ್ತ ನಿರ್ದೇಶನ ನೀಡುತ್ತಿದ್ದರೆಂದೂ ತಿಳಿದುಬಂದಿತ್ತು. ಈ ಪ್ರಕರಣದಲ್ಲಿ ಪಾಕಿಸ್ತಾನಿ ಪ್ರಜೆ ಜಿಯಾ ಉರ್ ರೆಹಮಾನ್ ಹಾಗೂ ಇನ್ನೊಬ್ಬ ಐಜಾದ್ ಶೇಖ್ ಕೂಡ ತಪ್ಪಿತಸ್ಥರೆಂದು ಕೋರ್ಟ್ ತೀರ್ಮಾನಿಸಿದೆ.
ಈ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ರಿಯಾಝ್ ಭಟ್ಕಳನ ಪತ್ತೆಗೆ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಎನ್ ಐ ಎ ಹೇಳಿದೆ.