ಕಾಸರಗೋಡು ಯುವಕನನ್ನು ದೆಹಲಿಯಲ್ಲಿ ಬಂಧಿಸಿದ ಎನ್ನೈಎ

ಐ ಎಸ್ ನಂಟು

ನವದೆಹಲಿ : ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಜತೆ ನಂಟು ಇರುವ ಆರೋಪದ ಮೇಲೆ ಕಾಸರಗೋಡಿನ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ಏಜನ್ಸಿಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಬಂಧಿತನನ್ನು ಮೊಯಿನುದ್ದೀನ್ ಪರಕದವತ್ತ್ (25) ಎಂದು ಗುರುತಿಸಲಾಗಿದೆ.

ಫೆಬ್ರವರಿ 14ರಂದು  ಅಬು ಧಾಬಿಯಿಂದ ದೆಹಲಿಯ ಇಂದಿರಾ ಗಾಂಧಿ ವಿಮಾನ  ನಿಲ್ದಾಣಕ್ಕೆ ಆಗಮಿಸಿದ ಆತನನ್ನು ಏಜನ್ಸಿಯು ವಿಚಾರಣೆಗಾಗಿ ತನ್ನ ಮುಖ್ಯ ಕಚೇರಿಗೆ ಕರೆಸಿಕೊಂಡ ವೇಳೆ ಆತ ತಾನು ಕೂಡ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಭಾಗವಾಗಿ ಸಂಚೊಂದನ್ನು ನಡೆಸಿದವರೊಂದಿಗೆ ಶಾಮೀಲಾಗಿರುವುದಾಗಿ ಒಪ್ಪಿಕೊಂಡ ನಂತರ ಆತನನ್ನು ಬಂಧಿಸಲಾಗಿದೆ.

ಕೇರಳದ ಕೆಲ ಯುವಕರು  ಕೊಲ್ಲಿ ದೇಶಗಳಲ್ಲಿರುವ ಇನ್ನಿತರರ ಜತೆ ಸೇರಿ ತಮ್ಮ ಆನಲೈನ್ ಏಜಂಟರ ಅಣತಿಯಂತೆ ಸಂಚು ಹೂಡಿದ ಪ್ರಕರಣದ ಸಂಬಂಧ ಈ ಬಂಧನ ನಡೆದಿದೆ.

ಈ ಸಂಚಿನ ಭಾಗವಾಗಿದ್ದ ಐದು ಮಂದಿಯನ್ನು ಕೇರಳದ ಕಣ್ಣೂರು ಜಿಲ್ಲೆಯಿಂದ ಕಳೆದ ವರ್ಷದ ಅಕ್ಟೋಬರ್ 2ರಂದು ಬಂಧಿಸಲಾಗಿದ್ದರೆ, ಇನ್ನೊಬ್ಬನನ್ನು ಅದೇ ದಿನ ಕಲ್ಲಿಕೋಟೆಯಲ್ಲಿ ಬಂಧಿಸಲಾಗಿತ್ತು.

`ಟೆಲಿಗ್ರಾಂ ಗ್ರೂಪ್’ ಒಂದರ ಮುಖಾಂತರ ನಡೆಯುತ್ತಿದ್ದ ಸಂಚಿನಲ್ಲಿ ಬಂಧಿತ ಮೊಯಿನುದ್ದೀನ್ ಪ್ರಮುಖ ಪಾತ್ರ ವಹಿಸಿದ್ದನೆಂದು ಎನ್ನೈಎ ಹೇಳಿಕೊಂಡಿದೆ. ಈ ಗ್ರೂಪಿನಲ್ಲಿ ಆತ ಅಬು-ಅಲ್-ಇಂಡೊನೇಸಿ  ಹಾಗೂ ಇಬ್ನ್ ಅಬ್ದುಲ್ಲಾ ಎಂದು ಗುರುತಿಸಲ್ಪಡುತ್ತಿದ್ದ. “ಅಬು ಧಾಬಿಯಿಂದ ಕೇರಳದ ಐಎಸ್ ಯುವಕರಿಗೆ ಆತ ಕಳೆದ ವರ್ಷ ವೆಸ್ಟರ್ನ್ ಯೂನಿಯನ್ ಮೂಲಕ ಹಣ ವರ್ಗಾಯಿಸಿದ್ದ” ಎಂದೂ ತನಿಖಾ ಸಂಸ್ಥೆ ತಿಳಿಸಿದೆ.