ಜೈಲಿನಲ್ಲಿ ದಲಿತ ಕೈದಿಗಳಿಗೆ ದೌರ್ಜನ್ಯ : ಗುಜರಾತ ಡೀಜಿಗೆ ಎನ್ನೆಚ್ಚಾರ್ಸಿ ನೋಟಿಸ್

ನವದೆಹಲಿ : ಗುಜರಾತ್ ಜೈಲಿನೊಳಗೆ ಕೆಳವರ್ಗದವರು (ದಲಿತರು) ತೀವ್ರ ಅನ್ಯಾಯ ಎದುರಿಸುತ್ತಿದ್ದಾರೆಂಬ ಮಾಧ್ಯಮ ವರದಿಗಳಾಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಗುಜರಾತ್ ಐಜಿ (ಕಾರಾಗೃಹ) ನೋಟಿಸು ಜಾರಿ ಮಾಡಿದೆ.

ದಲಿತ ಕೈದಿಗಳಿಗೆ ಅಮ್ರೇಲಿ ಜಿಲ್ಲಾ ಜೈಲಿನಲ್ಲಿ ಅಳವಡಿಸಲಾಗಿರುವ ಜಲ ಸ್ಥಾವರದ ಕುಡಿಯುವ ನೀರನ್ನೂ ಒದಗಿಸುವುದಿಲ್ಲ. ಮೇಲ್ವರ್ಗದ ಕೈದಿಗಳ ದೌರ್ಜನ್ಯ ಹೆಚ್ಚಾಗಿದ್ದು, ಈ ಬಗ್ಗೆ ದಲಿತ ಕೈದಿಗಳು ದೂರು ನೀಡಿದರೂ ಜೈಲು ಅಧೀಕ್ಷಕ ಲಕ್ಷಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ನೋಟಿಸ್ ಜಾರಿಗೊಳಿಸಿದ್ದು, ಆರು ವಾರದೊಳಗೆ ವರದಿ ನೀಡುವಂತೆ ಐಜಿಗೆ ಸೂಚಿಸಿದೆ.

ಜಾತಿ, ಧರ್ಮ, ಲಿಂಗ ಆಧರಿಸಿ ಕೈದಿಗಳೊಂದಿಗೆ  ತಾರತಮ್ಯ ಧೋರಣೆ ಅನುಸರಿಸುವಂತಿಲ್ಲ ಎಂದು ಭಾರತೀಯ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆಂದು ಆಯೋಗ ಜನವರಿ 6ರಂದು ಜಾರಿಗೊಳಿಸಿದ ತನ್ನ ನೋಟಿಸಿನಲ್ಲಿ ಸ್ಪಷ್ಟಪಡಿಸಿದೆ.

“ಆರೋಪ ಸತ್ಯವೆಂದಾದಲ್ಲಿ ಕ್ರಮಕ್ಕೆ ಕೈಗೊಳ್ಳಬೇಕಾಗುತ್ತದೆ. ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ ಸುರಕ್ಷತೆ ಒದಗಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ” ಎಂದು ಆಯೋಗ ಹೇಳಿದೆ.

ಅಮ್ರೇಲಿ ಜಿಲ್ಲಾ ಕಾರಾಗೃಹದಲ್ಲಿ 110 ದಿನ ಕಳೆದಿರುವ ವಕೀಲರೊಬ್ಬರು ತನ್ನ ಅನುಭವದೊಂದಿಗೆ ಇತರರ ಸ್ಥಿತಿಗತಿಯನ್ನು ಮಾಧ್ಯಮಗಳಿಗೆ ವಿವರಿಸಿದ್ದಾರೆ. ಜೈಲಿನೊಳಗೆ ಬರುವ ಕೈದಿಗಳು ದಲಿತರಾಗಿದ್ದರೆ, ಅಲ್ಲಿರುವ ಮೇಲ್ವರ್ಗದ ಕೈದಿಗಳು ಅವರಿಗೆ ಬೈಯುತ್ತಾರೆ ಮತ್ತು ನಿರಂತರ ಕಿರುಕುಳ ಆರಂಭಿಸುತ್ತಾರೆ. ಈ ದೃಶ್ಯ ನೋಡಿದರೂ ಜೈಲಧಿಕಾರಿಗಳು ಕ್ರಮ ಕೈಗೊಳ್ಳುವುದಿಲ್ಲ ಎಂದು ವಕೀಲ ಆರೋಪಿಸಿದ್ದಾರೆ.