ರಾ ಹೆದ್ದಾರಿ ಬದಿಯ ಅಂಗಡಿ ಹೋರ್ಡಿಂಗ್ ತೆರವಿಗೆ ಚಾಲನೆ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ಹಲವು ಸಲ ಎಚ್ಚರಿಕೆಗಳನ್ನು ನೀಡಿ ನೋಟೀಸುಗಳನ್ನು ನೀಡಿದರೂ ಮತ್ತೆ ಮತ್ತೆ ರಾಷ್ಟ್ರೀಯ ಹೆದ್ದಾರಿಯ ಇಕ್ಕಡೆಗಳಲ್ಲಿ ತಲೆ ಎತ್ತಿದ್ದ ಫ್ಲೆಕ್ಸ್, ಧ್ವಜ ತೋರಣ ಹಾಗು ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮತ್ತೆ ಸೋಮವಾರದಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಅಧಿಕೃತರು ಹಾಗು ಲೋಕೋಪಯೋಗಿ ಇಲಾಖೆ ಮತ್ತು ಪೆÇಲೀಸರ ಸಹಾಯದೊಂದಿಗೆ ತಲಪಾಡಿಯಿಂದ ಚಾಲನೆ ನೀಡಲಾಯಿತು.
ಇದು ಕಾಲಿಕಡವುವರೆಗೆ ಮುಂದುವರಿಯುವುದಾಗಿ ರಾಷ್ಟ್ರೀಯ ಹೆದ್ದಾರಿ ಅಸಿಸ್ಟಂಟ್ ಇಂಜಿನಿಯರ್ ಪ್ರಕಾಶ್ ತಿಳಿಸಿದರು.
ತಲಪಾಡಿ ಗಡಿ ಪ್ರದೇಶದಲ್ಲಿ ಮೋಟೆಲ್ ಆರಾಮ್ ಎದುರು ಭಾಗದಲ್ಲಿ ಹಾಕಲಾಗಿದ್ದ ಫಲಕವನ್ನು ತೆಗೆಸಲು ಸೂಚನೆ ನೀಡುವುದರೊಂದಿಗೆ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಬಳಿಕ ತೂಮಿನಾಡು, ಕುಂಜತೂರು, ಉದ್ಯಾವರ ಸೇರಿದಂತೆ ಹಾಗೇಯೇ ಮುಂದಕ್ಕೆ ಸಾಗಿತು.
ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿರುವ ಅನಧಿಕೃತ ಗೂಡಂಗಡಿ ಅದೇ ರೀತಿ ಇತರ ಫ್ಲೆಕ್ಸ್ ತೆರವುಗೊಳಿಸುತ್ತಿರುವುದು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಭಾಗವಾಗಿಯಲ್ಲವೆಂಬುದಾಗಿ ಅಧಿಕೃತರು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಭಾಗವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಇನ್ನಷ್ಟೆ ಚಾಲನೆ ನೀಡಬೇಕಾಗಿದೆಂಬುದಾಗಿ ಹೇಳಿದ್ದಾರೆ.
ಸರಕಾರದ ಸುತ್ತೋಲೆಯಂತೆ ರಾಷ್ಟ್ರೀಯ ಹೆದ್ದಾರಿ, ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕೃತರು ಹಾಗು ಪೆÇಲೀಸರ ಸಹಾಯದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಅನಧಿಕೃತವಾದ ಗೂಡಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಹಾಗು ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ನಾಗರಿಕರ ದೂರು ವ್ಯಾಪಕವಾಗುತ್ತಿದೆ.
ವ್ಯಾಪಾರಿ ಸಂಘಟನೆಗಳು ಹಾಗೂ ನಾಗರಿಕರ ವಲಯದಿಂದ ಅನಧಿಕೃತ ಗೂಡಂಗಡಿ ತೆರವಿಗೆ ಬೆಂಬಲವ್ಯಾಪಕವಾಗುತ್ತಿವೆ. ಇನ್ನೂ ಹಲವೆಡೆ ಅನಧಿಕೃತ ಗೂಡಂಗಡಿಗಳು ಬಾಕಿ ಉಳಿದಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.