ಹೆದ್ದಾರಿ ಪಕ್ಕ ಮದ್ಯ ನಿಷೇಧ : ಗರಿಗೆದರಿದ ಕಳಪೆ ಬ್ರಾಂಡುಗಳ ಶರಾಬು ಮಾರಾಟ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲಿದ್ದ ಮದ್ಯದಂಗಡಿಗಳಿಗೆ ನಿಷೇಧ ಹೇರಲಾದ ಬಳಿಕ ಎಲ್ಲವೂ ಸರಿಯಾಗಿದೆ ಎಂದು ಹೇಳುವಂತಿಲ್ಲ. ಯಾಕೆಂದರೆ ಈಗ ರಸ್ತೆ ಸುರಕ್ಷತೆ ಹಿಂದಿಗಿಂತ ತೀರಾ ಅಪಾಯಕಾರಿಯಾಗಿದೆ !

ಅವಳಿ ಜಿಲ್ಲೆಯ ಮೂಲಕ ಹಾದು ಹೋಗುವ ಎನ್ ಎಚ್ 66, 75 ಮತ್ತು 169ರಲ್ಲಿ ಹಾಗೂ ಐದು ರಾಜ್ಯ ಹೆದ್ದಾರಿಗಳ ಬದಿಯಲ್ಲಿ 102 ಬಾರುಗಳು ಇದ್ದವು. ಇಲ್ಲಿ ಆಹಾರವೂ, ಮದ್ಯವೂ ಲಭ್ಯವಿತ್ತು. ಮದ್ಯ ನಿಷೇಧಗೊಂಡ ಬಳಿಕ ಇಲ್ಲಿನ ಹೋಟೆಲುಗಳ (ಬಾರುಗಳ) ವ್ಯವಹಾರ ಶೇ 80ರಷ್ಟು ಕುಸಿದಿದೆ. ಕೆಲವರು ತಮ್ಮಲ್ಲಿರುವ ಸಂಗ್ರಹಿತ ಮದ್ಯವನ್ನು ಅಂಗಡಿಗಳು ಮತ್ತು ಹತ್ತಿರದ ಮನೆಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ. ಇಂತಹ ಸ್ಥಳಗಳಲ್ಲಿ ಅನಧಿಕೃತ ಅಥವಾ ಸ್ಥಳೀಯ ಬ್ರಾಂಡುಗಳ ಮದ್ಯವೂ ವ್ಯಾಪಕವಾಗಿ ಮಾರಾಟವಾಗುತ್ತಿದೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದೆ.

ಬಾರುಗಳ ಎದುರಿಗೆ `ತಾಂತ್ರಿಕ ಕಾರಣದಿಂದ ಬಾರ್ ಮುಚ್ಚಲಾಗಿದೆ’ ಎಂಬ ನೋಟಿಸು ಹಚ್ಚಲಾಗಿದ್ದರೂ, ಮದ್ಯಕ್ಕಾಗಿ ಅಲೆದಾಡುವ ಗ್ರಾಹಕರಿಗೆ ಹತ್ತಿರ ಅಂಗಡಿ ಮತ್ತು ಮನೆಗಳಲ್ಲಿ ಮದ್ಯದ ವ್ಯವಸ್ಥೆ ಮಾಡಲಾಗಿದೆ ಅಥವಾ ಪಾರ್ಸೆಲ್ ಮಾಡಲು ಅಥವಾ ಮಾಹಿತಿ ನೀಡಲು ಬಾರ್ ಮಾಲಕರೇ ಕೆಲವರನ್ನು ನಿಯುಕ್ತಿಗೊಳಿಸಿದ್ದಾರೆ.

ಶರಾಬು ಕುಡಿಯಲೇ ಬೇಕೆನ್ನುವ ಕುಡುಕರು ಕೈಗೆ ಸಿಗುವ ಯಾವುದೇ ಮದ್ಯ ಕುಡಿಯುತ್ತಾರೆ. “ನಮಗೀಗ ಅಪರಿಚಿತ ಬ್ರಾಂಡುಗಳ ಮದ್ಯ ಸಿಗುತ್ತಿವೆ. ಇದರ ಗುಣಮಟ್ಟ ತೀರಾ ಕಳಪೆಯಾಗಿದೆ. ಇದು ಅಪಾಯಕಾರಿಯಾಗಿವೆ” ಎಂದು ಬಾರ್ ಮಾಲಕರೊಬ್ಬರು ಹೇಳಿದ್ದಾರೆ.