ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಭೂ ಕ್ರೋಢೀಕರಣ, ಪರಿಹಾರ ಪ್ಯಾಕೇಜಿಗೆ ಭೂಮಾಲಿಕರ ಅಸಮಾಧಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಭೂಮಿ ಬಿಟ್ಟುಕೊಟ್ಟ ಭೂಮಾಲಿಕರು ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ನಿರ್ಧರಿಸಿರುವ ಪರಿಹಾರ ಪ್ಯಾಕೇಜಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಎರಡನೇ ಹಂತದ ಯೋಜನೆಯ ಕುಂದಾಪುರದಿಂದ ಶಿರೂರು ಹೆದ್ದಾರಿ ವಿಸ್ತರಣೆಗೆ ಹಲವು ಭೂಮಾಲಿಕರಿಂದ ಭೂಮಿಯನ್ನು ಕ್ರೋಢೀಕರಿಸಲಾಗಿದ್ದು, ಪ್ರಾಧಿಕಾರ ಮತ್ತು ಜಿಲ್ಲಾಡಳಿತ ನಿರ್ಧರಿಸಿರುವ ಪರಿಹಾರ ಪ್ಯಾಕೇಜ್ ಅನುಚಿತವಾಗಿದೆ ಎಂದು ಭೂಮಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಜಿಲ್ಲೆಯಲ್ಲಿ ಎರಡನೇ ಹಂತದ ಹೆದ್ದಾರಿ ವಿಸ್ತರಣೆಗೆ 2015ರ ಜೂನ್ ತಿಂಗಳಲ್ಲಿ ಭೂ ಕ್ರೋಢೀಕರಣಕ್ಕೆ ಮೊದಲ ನೊಟೀಸನ್ನು ಹೊರಡಿಸಲಾಗಿದ್ದು, ಭೂ ಮಾಲಿಕರಿಗೆ ನೀಡಲಾದ ಪರಿಹಾರ ಮೊತ್ತ ತೀರಾ ಕಡಿಮೆಯಾಗಿದೆ” ಎಂದು ವಕೀಲ ಮಗ್ನೇಶ್ ಶ್ಯಾನುಭಾಗ್ ಹೇಳಿದ್ದಾರೆ. ಸರ್ಕಾರದ ನಿರ್ಧಾರದ ಪ್ರಕಾರ ಮಾರುಕಟ್ಟೆ ಮೌಲ್ಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಾಗದ ಮೊತ್ತ ರೂ 2 ಲಕ್ಷ ಎಂದು ತಿಳಿಸಲಾಗಿತ್ತು. ಆದರೆ ಈ ಇದೀಗ ಸೆಂಟ್ಸ್ ಒಂದರ ದರ ರೂ 30,000 ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.

2012ರಲ್ಲಿ ಭೂ ಕ್ರೋಢೀಕರಣದ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸೆಂಟ್ಸ್ ಭೂಮಿಗೆ ರೂ 75,000 ನಿರ್ಧರಿಸಿದ್ದರೂ ಈ ನಿಲುವನ್ನು ಭೂ ಮಾಲಿಕರು ವಿರೋಧಿಸಿದ್ದರು.

ಈ ಹಿಂದಿನ ಜಿಲ್ಲಾಧಿಕಾರಿ ಡಾ ವಿಶಾಲ್ 2015ರಲ್ಲಿ ಭೂ ಕ್ರೋಢೀಕರಿಸಲಾದ ಭೂ ಮಾಲೀಕರಿಗೆ ಸೆಂಟ್ಸೊಂದಕ್ಕೆ ರೂ 50,000 ಹೆಚ್ಚುವರಿ ಹಣ ಪಾವತಿಸಲು ನಿರ್ಧರಿಸಿದ್ದರು. ಹಾಗಾಗಿ ಒಂದು ಸೆಂಟ್ಸ್ ಜಾಗದ ಪರಿಹಾರ ಮೊತ್ತ ರೂ 1.25 ಲಕ್ಷದಂತೆ ಭೂಮಾಲಿಕರಿಗೆ ದೊರೆಯಿತು. ಆದರೆ ಪ್ರಸ್ತುತ ಜಿಲ್ಲಾಧಿಕಾರಿ ಪಕ್ಷಪಾತ ಧೋರಣೆ ತಳೆದಿದ್ದು, ಹೆಚ್ಚು ಹಣಕ್ಕಾಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿದ್ದಾರೆ. ಮೇಲ್ಮನವಿ ಪ್ರಾಧಿಕಾರ ಕೂಡ ನಿರ್ಲಕ್ಷ್ಯತೆ ತೋರಿಸಿದ್ದು, ನಿರ್ಧಿಷ್ಟ ಭೂಮಾಲಿಕರಲ್ಲಿ ಪಕ್ಷಪಾತ ತೋರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.