ರಾಷ್ಟ್ರೀಯ ಹೆದ್ದಾರಿ ಸಮಿತಿಯಿಂದ ವಾಹನ ಪ್ರಚಾರಣಾ ಜಾಥಾಕ್ಕೆ ಚಾಲನೆ

ಉದ್ಘಾಟನೆ ಬಳಿಕ ಮಾತನಾಡುತ್ತಿರುವ ಹೈ ನ್ಯಾಯಾಧೀಶ ಹರೀಶ್ ವಾಸುದೇವನ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎನ್ ಎಚ್ 17 ಆಕ್ಷನ್ ಕೌನ್ಸಿಲ್ ವತಿಯಿಂದ ತಲಪಾಡಿಯಿಂದ ವಾಹನ ಪ್ರಚರಣ ಜಾಥಾಕ್ಕೆ ಶನಿವಾರದಂದು ಚಾಲನೆ ದೊರಕಿತು.

ತಲಪಾಡಿಯಿಂದ ಚಾಲನೆಗೊಂಡ ವಾಹನ ಪ್ರಚಾರಣ ಜಾಥಾವನ್ನು ಕೇರಳ ಹೈಕೋರ್ಟು ನ್ಯಾಯಾಧೀಶ ಹರೀಶ್ ವಾಸುದೇವನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರಕಾರ ಇದೀಗ 45 ಕಿಲೋ ಮೋಟರ್ ವ್ಯಾಪ್ತಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣ ಮಾಡಲು ಮುಂದುವರಿಯುತ್ತಿದೆ. ಆದರೆ ಇದು ಸ್ಥಳವನ್ನು ಕಳಕೊಳ್ಳುವವರು ಮಾತ್ರ ಅನುಭವಿಸುವಂತದ್ದು ಅಲ್ಲ. ಸಾಮಾನ್ಯ ಜನತೆ ಕೂಡಾ ಚಿಂತಿಸ ಬೇಕಾದ ಅನಿವಾರ್ಯತೆ ಇದೆ. ಚತುಷ್ಪತ ಹೆದ್ದಾರಿಗೆ 30 ಮೀಟರ್ ಧಾರಾಳವಾಗಿ ಸಾಕು. ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಸರಕಾರ 45 ಮೀಟರನ್ನು ನೀಡುವಂತೆ ಒತ್ತಾಯಿಸುತ್ತಿದೆ. ಇದಕ್ಕೆ ಪ್ರತಿಫಲವಾಗಿ ಖರೀದಿಸುತ್ತಿರುವ ಸ್ಥಳಕ್ಕೂ ಸರಿಯಾದ ಬೆಲೆ ನಿರ್ಣಯಿಸದೇ ಇರುವುದು ವಿಪರ್ಯಾಸಕರ ಎಂದು ಹೇಳಿದರು

ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿ ಇಬ್ಬದಿ ರಸ್ತೆಯನ್ನು ಕೂಡಲೇ 4/6 ಪಥವಾಗಿ ರಸ್ತೆಯ ಇಕ್ಕೆಲಗಳಲ್ಲಿರುವ ಸರಕಾರಿ ಸ್ಥಳ 30 ಮೀಟರಿನಲ್ಲಿ ನಿರ್ಮಿಸಬೇಕು, ಸಂಚಾರ ಶುಲ್ಕ ಕೈಬಿಟ್ಟು ರಸ್ತೆ ನಿರ್ಮಾಣವನ್ನು ಸರಕಾರವೇ ಕೈಗೊಳ್ಳಬೇಕು, ಅಶಾಸ್ತ್ರೀಯವಾದ ಅಲೈನ್ಮೆಂಟ್ ರದ್ದು ಪಡಿಸಬೇಕು ಮೊದಲಾದ ಬೇಡಿಕೆಯನ್ನು ಮುಂದಿಟ್ಟು ವಾಹನ ಪ್ರಚರಣ ನಡೆಯುತ್ತಿದೆ. ಹೆದ್ದಾರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣಗೊಳಿಸಲಾಗುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗಾಗಲೇ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ನೇತಾರರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಮಂಜೇಶ್ವರ, ಉಪ್ಪಳ, ಕುಂಬಳೆ, ಕಾಸರಗೋಡು ಮೊದಲಾದೆಡೆ ವಾಹನ ಜಾಥಾ ಸಂಚರಿಸಿ ನಾಳೆ ಕಾಲಿಕಡವಿನಲ್ಲಿ ಸಮಾಪ್ತಿಗೊಳ್ಳಲಿದೆ.