ಎತ್ತಿನಹೊಳೆ ವಿಚಾರಣೆಯಲ್ಲಿ ಹಸಿರು ಪೀಠ ವಿಳಂಬ

ಪರಿಸರವಾದಿಗಳಿಗೆ ಕಳವಳ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿವಾದಿತ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಪ್ರಕರಣವು ರಾಷ್ಟ್ರೀಯ ಹಸಿರು ಪೀಠದೆದುರು ಬಂದು ಎರಡು ವರ್ಷಗಳ ಮೇಲಾಗಿದ್ದರೂ ಇನ್ನೂ ಯಾವುದೇ ಅಂತಿಮ ಆದೇಶ ಹೊರಬೀಳದೇ ಇರುವುದು ಪರಿಸರವಾದಿಗಳಿಗೆ ತೀವ್ರ ನಿರಾಸೆಯುಂಟು ಮಾಡಿದೆ.

“ಪ್ರಕರಣದ ಅಂತಿಮ ಆದೇಶ ಬಿಡಿ, ತಡೆಯಾಜ್ಞೆಯಲ್ಲದೇ ಇದ್ದರೂ ಕನಿಷ್ಠ ಮಧ್ಯಂತರ ತೀರ್ಪಾದರೂ ಹೊರ ಬೀಳಬಹುದೆಂದು ನಾವು ಅಂದುಕೊಂಡಿದ್ದೆವು” ಎಂದು ನಿರಾಸೆ ವ್ಯಕ್ತಪಡಿಸುತ್ತಾರೆ, ಕೃಷಿ ಸಂಘದ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷ ದೇವರಾಜ್ ಹೆತ್ತೂರ್.

ರಾಷ್ಟ್ರೀಯ ಹಸಿರು ಪೀಠಕ್ಕೆ ದೂರು ಸಲ್ಲಿಸುವ ಪರಿಸರವಾದಿಗಳು ಇನ್ನೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಒಮ್ಮೆ ಪ್ರಕರಣ ಪೀಠದ ಮುಂದೆ ಬಂತೆಂದಿಟ್ಟುಕೊಳ್ಳಿ, ಮತ್ತೆ ಅದೇ ಪ್ರಕರಣವನ್ನು ಹಿಡಿದುಕೊಂಡು ಬೇರೆ ನ್ಯಾಯಾಲಯದ ಕದ ತಟ್ಟುವ ಹಾಗಿಲ್ಲ. ಹೀಗಿರುವಾಗ ಸದ್ಯ ಪರಿಸರವಾದಿಗಳೆದುರು ಮೂರು ಆಯ್ಕೆಗಳಿವೆ. ಸುಪ್ರೀಂ ಕೋರ್ಟಿನ ಮೊರೆ ಹೋಗಿ ಹಸಿರು ಪೀಠದ ಮುಂದಿರುವ ಪ್ರಕರಣವನ್ನು ಕೈಬಿಡುವಂತೆ ಕೇಳಿಕೊಳ್ಳುವುದು, ಪ್ರಕರಣದ ವಿಚಾರಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸುವಂತೆ ಮನವಿ ಮಾಡುವುದು ಹಾಗೂ ಈ ಪ್ರಕರಣವನ್ನು ಹಸಿರು ಪೀಠದ ಚೆನ್ನೈ ಪೀಠಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟಿಗೆ ಮನವಿ ಮಾಡುವುದು.

ಸದ್ಯ ಹಸಿರು ಪೀಠದಲ್ಲಿ ನಡೆಯುತ್ತಿರುವ ನಿಧಾನಗತಿಯ ವಿಚಾರಣೆ ರಾಜ್ಯ ಸರಕಾರ ಮತ್ತು ಕರ್ನಾಟಕ ನಿರಾವರಿ ನಿಗಮದ ಮೇಲೆ ಶಂಕೆ ಮೂಡುವಂತಾಗಿದೆ ಎಂದು ನೇತ್ರಾವತಿ ರಕ್ಷಿಸಿ ಅಭಿಯಾನದ ದಿನೇಶ್ ಹೊಳ್ಳ ಹೇಳುತ್ತಾರೆ. ಸರಕಾರ ಅಭಿವೃದ್ಧಿಯ  ಬಗ್ಗೆಯೇ ಯೋಚಿಸುತ್ತಿದೆಯಲ್ಲದೆ ಪರಿಸರದ ಬಗ್ಗೆಯಲ್ಲ ಎಂದು ಅವರು ಆರೋಪಿಸಿದರು. “ಎತ್ತಿನಹೊಳೆ ವಿಚಾರದಲ್ಲಿ ನ್ಯಾಯಾಲಯಗಳು ನ್ಯಾಯ ಒದಗಿಸಲು ಸೋತರೆ ಅದು ಪ್ರಜಾಪ್ರಭುತ್ವದ ವೈಫಲ್ಯವಾಗುತ್ತದೆ” ಎಂದೂ ಅವರು ಅಭಿಪ್ರಾಯ ಪಟ್ಟರು.

ಬಾಕಿ ಪ್ರಕರಣಗಳು

ಆರಂಭದಲ್ಲಿ ರಾಷ್ಟ್ರೀಯ ಹಸಿರು ಪೀಠದ ಚೆನ್ನೈ ಪೀಠದ ಮುಂದೆ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು. ಎಚ್ ಎ ಕಿಶೋರಕುಮಾರ್, ಎಸ್ ಎನ್ ಸೋಮಶೇಖರ್, ವಿ ವಿ ಭಟ್, ಸಿ ಯತಿರಾಜು ಹಾಗೂ ಪುರುಷೋತ್ತಮ್ ಚಿತ್ರಾಪುರ ಇವರು ಅರ್ಜಿದಾರರು. ಆದರೆ ಈಗ ಕಿಶೋರಕುಮಾರ್ ಮತ್ತು ಪುರುಷೋತ್ತಮ್ ಅವರು ಸಲ್ಲಿಸಿದ ಮೂಲ ಅಪೀಲು ಹಾಗೂ ಎಸ್ ಎನ್ ಸೋಮಶೇಖರ್ ಸಲ್ಲಿಸಿದ್ದ ಒಂದು ಅಪೀಲು ಎನ್ಜಿಟಿ ಮುಂದೆ ಬಾಕಿಯಿದೆ.