ಹೈಕೋರ್ಟುಗಳಿರುವಲ್ಲಿ ಎನ್ಜಿಟಿ ಪೀಠ ಸ್ಥಾಪನೆಗೆ ಶಿಫಾರ್ಸು

ಬೆಂಗಳೂರು : ಹೈಕೋರ್ಟುಗಳಿರುವಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕರಣದ (ಎನ್ಜಿಟಿ) ಪೀಠಗಳು ಸ್ಥಾಪನೆಯಾಗಬೇಕು ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಭಾರತ ಕಾನೂನು ಆಯೋಗ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. ಇದರಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕರಣದ (ಎನ್ಜಿಟಿ) ಪೀಠ ಸ್ಥಾಪಿಸಬೇಕೆಂದು ವರ್ಷಗಳಿಂದ ರಾಜ್ಯ ಕಾನೂನು ತಜ್ಞರು ಮತ್ತು ಇತರರು ಸರ್ಕಾರದ ಮುಂದಿಟ್ಟ ಬೇಡಿಕೆಗೆ ಬಲ ಸಿಕ್ಕಿದಂತಾಗಿದೆ. ಕಾನೂನು ಆಯೋಗವು ಅಕ್ಟೋಬರ್ 27ರಂದು `ಹಸಿರು ಪ್ರಾಧಿಕರಣ ಮತ್ತು ಪೀಠ’ ವಿಷಯದಲ್ಲಿ ಕೇಂದ್ರಕ್ಕೆ ಮಹತ್ವದ ವರದಿ ಸಲ್ಲಿಸಿತ್ತು.

“ಪ್ರಾಧಿಕರಣದ ಪೀಠಗಳು ಹೈಕೋರ್ಟುಗಳಿರುವಲ್ಲಿ ಸ್ಥಾಪನೆಯಾದಲ್ಲಿ ನ್ಯಾಯ ನೀಡಿಕೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದು” ಎಂದು ಆಯೋಗ ಹೇಳಿದೆ. ಬೆಂಗಳೂರಿನಲ್ಲಿ ಎನ್ಜಿಟಿ ಪೀಠ ಸ್ಥಾಪಿಸಲು ಅಧಿಕಾರಿಗಳು ತಕ್ಷಣ ಗಮನಹರಿಸಬೇಕು. ಈಗ ಬೆಂಗಳೂರಿಗರು ನ್ಯಾಯಕ್ಕಾಗಿ ಎನ್ಜಿಟಿಯ ಪ್ರಾದೇಶಿಕ ಪೀಠವಿರುವ ದೂರದ ಚೆನ್ನೈಗೆ ಪ್ರವಾಸ ಮಾಡಬೇಕಾಗುತ್ತದೆ. ಎನ್ಜಿಟಿ ಪ್ರಧಾನ ಪೀಠ ನವದೆಹಲಿಯಲ್ಲಿದೆ.

“ಯಾವುದೇ ಕೋರ್ಟುಗಳು ಒಬ್ಬನ ಮನೆಯಿಂದ 50 ಕಿ ಮೀ ಅಂತರದಲ್ಲಿ ಅಥವಾ ಹೆಚ್ಚೆಂದರೆ ಅರ್ಧ ದಿನ ಪ್ರವಾಸದಲ್ಲಿ ಲಭ್ಯವಿರಬೇಕು. ಆಗ ಮಾತ್ರ ಪ್ರತಿಯೊಬ್ಬ ನಾಗರಿಕನಿಗೆ ನ್ಯಾಯ ಒದಗಿಸುವ ಪ್ರಕ್ರಿಯೆಗೆ ಅರ್ಥವಿರುತ್ತದೆ” ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

ಪರಿಸರ ಸಂಬಂಧಿ ಪ್ರಕರಣಗಳ ವಿಲೇವಾರಿಗೆ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ಕಾಯ್ದೆ (2010) ಅನುಷ್ಠಾನಗೊಳಿಸಲಾದ ಬಳಿಕ ಹೈಕೋರ್ಟುಗಳಲ್ಲಿ ದಾಖಲಾಗುವ ಹಸಿರು ಸಂಬಂಧಿ ಸಾರ್ವಜನಿಕ ಹಾಗೂ ವೈಯಕ್ತಿಕ ಪ್ರಕರಣಗಳು ಎನ್ಜಿಟಿಗೆ ವರ್ಗಾವಣೆಯಾಗುತ್ತಿದೆ.

ಸ್ಥಳೀಯ ಎನ್ಜಿಟಿ ಪೀಠಗಳು ಸ್ಥಾಪನೆಯಾದಲ್ಲಿ ನ್ಯಾಯ ವಿತರಣೆ ಇನ್ನಷ್ಟು ಸುಲಭವಾಗಲಿದೆ. ಆದ್ದರಿಂದ ಆಯೋಗದ ಶಿಫಾರಸಿಗೆ ಸರ್ಕಾರ ಶೀಘ್ರ ಮಾನ್ಯತೆ ನೀಡಬೇಕು ಎಂದು ಇಲ್ಲಿನ ಕಾನೂನು ತಜ್ಞರು ಹೇಳಿದ್ದಾರೆ.