ಮುಂದಿನ ಕೊರಿಯಾ ಯುದ್ಧ ಕ್ರೂರ, ಭೀಕರವಾಗಿರುತ್ತದೆ

  • ಸ್ಟೀವ್ ಮೋಲ್ಮನ್

ಫೆಬ್ರವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಜಪಾನ್ ಪ್ರಧಾನಿ ಶಿನ್ಜೊ ಅಬೆಯನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆ ಸಭೆಯನ್ನು ಭಂಗಗೊಳಿಸಿತ್ತು. ಕಳೆದ ವಾರ ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪರೀಕ್ಷೆ ಮಾಡಿದೆ. ಉತ್ತರ ಕೊರಿಯಾದ ಈ ಸಾಹಸಗಳು ಜಗತ್ತಿಗೆ ಹೊಸತೇನಲ್ಲ.  ಕೆಲವೇ ವರ್ಷಗಳ ಹಿಂದೆ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಪ್ರಯೋಗವನ್ನೂ ನಡೆಸಿತ್ತು. ಕೊರಿಯಾದ ಕ್ಷಿಪಣಿ ತಂತ್ರಜ್ಞಾನವೂ ದಾಪುಗಾಲು ಹಾಕುತ್ತಿದೆ. ಹಾಗಾಗಿ ಉತ್ತರ ಕೊರಿಯಾ ವಿರುದ್ಧ ಅಥವಾ ಕೊರಿಯಾ ವತಿಯಿಂದ ಯಾವುದೇ ಸಮರ ನಡೆಯುವುದು ದುಸ್ಸಾಧ್ಯ.  ಇದು ಕಿಮ್ ಸರ್ಕಾರಕ್ಕೆ ಆತ್ಮಹತ್ಯೆಯಂತೆಯೇ ಆಗುತ್ತದೆ. ಇದೇ ವೇಳೆ ಜಪಾನಿನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಉತ್ತರ ಕೊರಿಯಾ ಆಕ್ರಮಣ ನಡೆಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಅಮೆರಿಕದ ಅಧ್ಯಕ್ಷ ಟ್ರಂಪ್ ಚೀನಾ ಕೊರಿಯಾ ಸಮಸ್ಯೆಯನ್ನು ಬಗೆಹರಿಸದಿದ್ದರೆ `ನಾವು ಬಗೆಹರಿಸುತ್ತೇವೆ’ ಎಂದು ಘೋಷಿಸಿದ್ದಾರೆ. ಕಳೆದ ವಾರ ಸಿರಿಯಾ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲೇ ತಮ್ಮ ಸೇನೆಯ ಅಣ್ವಸ್ತ್ರ ಹೊತ್ತ ಪಡೆಯನ್ನು ಉತ್ತರ ಕೊರಿಯಾ ಕಡೆಗೆ ರವಾನಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.

ಉ ಕೊರಿಯಾ ಸರ್ಕಾರ ತನ್ನ ಯುದ್ಧ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವಂತೆಲ್ಲಾ  ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಮತ್ತೂ ಪ್ರಬಲ ಅಸ್ತ್ರಗಳನ್ನು ಹೊತ್ತು ಕೊರಿಯಾದ ಸುತ್ತುವರಿಯುತ್ತಿವೆ. ಉತ್ತರ ಕೊರಿಯಾದ ಕ್ಷಿಪಣಿಗಳನ್ನು ನಿಶ್ಫಲಗೊಳಿಸಲು ಅಮೆರಿಕ ದಕ್ಷಿಣ ಕೊರಿಯಾದಲ್ಲಿ ತನ್ನ ರಕ್ಷಣಾ ನೆಲೆ ಸ್ಥಾಪಿಸಿದೆ. ಈ ಬೆದರಿಕೆಗಳಿಗೆ ದಿಟ್ಟತನದಿಂದ ಸ್ಪಂದಿಸಿರುವ ಉತ್ತರ ಕೊರಿಯ ತನ್ನ ಕ್ಷಿಪಣಿ ಕೌಶಲ್ಯವನ್ನು ವೃದ್ಧಿಸಿಕೊಳ್ಳುತ್ತಿದೆ. ಈ ಹಿಂದೆ ಉತ್ತರ ಕೊರಿಯಾ ತನ್ನ ಸ್ಕಡ್, ನೊಡಂಗ್, ಮತ್ತಿತರ ಕ್ಷಿಪಣಿಗಳನ್ನು ಪರೀಕ್ಷಿಸುತ್ತಿದ್ದರೆ ಇತ್ತೀಚಿನ ವರ್ಷಗಳಲ್ಲಿ ಈ ಶಸ್ತ್ರಾಸ್ತ್ರಗಳನ್ನು ಬಳಸುವ ವಿಧಾನಗಳನ್ನು ಪರೀಕ್ಷಿಸಿಕೊಳ್ಳುತ್ತಿದೆ. ಆದರೆ ಅಣ್ವಸ್ತ್ರಗಳನ್ನು ಬಳಸಿದಷ್ಟೂ ತನಗೇ ಅಪಾಯಕಾರಿಯಾಗುತ್ತದೆ ಎಂದು ಅರಿತಿರುವ ಕಿಮ್ ಸರ್ಕಾರ ಸದ್ದಾಂ ಹುಸೇನ್ ಮತ್ತು ಗಡ್ಡಾಫಿಯನ್ನು ಉಲ್ಲೇಖಿಸುವ ಮೂಲಕ ಅವರ ಬಳಿ ಅಣ್ವಸ್ತ್ರಗಳು ಇದ್ದಿದ್ದಲ್ಲಿ ಅಮೆರಿಕದ ಕುತಂತ್ರಕ್ಕೆ ಬಲಿಯಾಗುತ್ತಿರಲಿಲ್ಲ ಎಂದು ಹೇಳಿದೆ.

ಒಂದು ವೇಳೆ ಕೊರಿಯಾ ಮತ್ತು ಅಮೆರಿಕದ ನಡುವೆ ಯುದ್ಧ ಸಂಭವಿಸಿದ್ದೇ ಆದಲ್ಲಿ ಚೀನಾದ ನೆರವಿಲ್ಲದೆ ಹೋದರೆ ಕೊರಿಯಾ ಕ್ಷಣಮಾತ್ರದಲ್ಲಿ ಧೂಳಿಪಟವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಉತ್ತರ ಕೊರಿಯಾದ ಸೇನೆಯಲ್ಲಿ ಒಂದು ಲಕ್ಷ ಸೈನಿಕರಿದ್ದು, ಯುದ್ಧವಿಲ್ಲದ ಸಂದರ್ಭದಲ್ಲಿ ಈ ಸೇನಾನಿಗಳು ಅಪೌಷ್ಟಿಕತೆಯಿಂದ ನರಳುತ್ತಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಉತ್ತರ ಕೊರಿಯಾ ಮೊದಲನೆಯದಾಗಿ ದಕ್ಷಿಣ ಕೊರಿಯಾದ ಮೇಲೆ ಆಕ್ರಮಣ ಮಾಡುವುದು ಖಚಿತವಾಗಿದೆ. ಯುದ್ಧ ಎಷ್ಟೇ ದೀರ್ಘಕಾಲ ನಡೆದರೂ ಉತ್ತರ ಕೊರಿಯಾ ಸಾಕಷ್ಟು ಅಪಾಯ ಮತ್ತು ಹಾನಿ ಉಂಟುಮಾಡುವ ಸಾಮಥ್ರ್ಯ ಹೊಂದಿದೆ. ಅಣ್ವಸ್ತ್ರಗಳಿಗಿಂತಲೂ ರಾಸಾಯನಿಕ ಅಸ್ತ್ರಗಳನ್ನು ಬಳಸುವ ಸಾಧ್ಯತೆಗಳು ಹೆಚ್ಚಾಗಿವೆ. ಕೊರಿಯಾ ಬಳಿ ಅಪಾಯಕಾರಿಯಾದ ಯಾವುದೇ ಶಸ್ತ್ರಾಸ್ತ್ರ ಇದ್ದರೂ ಸುರಂಗಗಳ ಬಳಕೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಟ್ರಕ್ಕುಗಳಲ್ಲಿ ಕೊಂಡೊಯ್ಯುವ ಮೊಬೈಲ್ ಕ್ಷಿಪಣಿಗಳನ್ನು ರಸ್ತೆ ಸುರಂಗಗಳ ಮೂಲಕ ಕೊಂಡೊಯ್ಯುವುದು ಕಷ್ಟಕರವಾಗುತ್ತದೆ. ಮಧ್ಯಪ್ರಾಚ್ಯದ ಅನುಭವಗಳ ಹಿನ್ನೆಲೆಯಲ್ಲಿ ನೋಡಿದಾಗ ಉತ್ತರ ಕೊರಿಯಾ ದಂಗೆಯನ್ನು ನಿಯಂತ್ರಿಸುವ ಸಾಮಥ್ರ್ಯವನ್ನು ಇನ್ನೂ ಹೆಚ್ಚಿಸಿಕೊಳ್ಳುವುದು ಅಗತ್ಯ. ಕಿಮ್‍ನನ್ನು ತಮ್ಮ ನಾಯಕ ಎಂದೇ ಪರಿಗಣಿಸುವ ಉ ಕೊರಿಯಾದ ಸಾವಿರಾರು ವಿಶೇಷ ಸೇನಾಪಡೆಗಳು ಬೆಟ್ಟಗುಡ್ಡಗಳಲ್ಲಿ ಅವಿತು ಅಮೆರಿಕ ವಿರುದ್ಧ ಶಾಶ್ವತ ಯುದ್ಧ ಸಾರುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ.. ಇರಾಕಿನಲ್ಲಿ ಸದ್ದಾಂ ಹುಸೇನ್ ಮರಣದ ನಂತರ ಅವರ ಹಿಂಬಾಲಕರು ಇದೇ ರೀತಿಯ ಸಂಘರ್ಷ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

LEAVE A REPLY