ಧರ್ಮಸ್ಥಳದ ನವವಧು ಸುಳ್ಯದಲ್ಲಿ ಗೃಹಬಂಧನ

ಗೃಹಬಂಧನದಲ್ಲಿರುವ ನವವಧು, ಪೊಲೀಸರಿಗೆ ನೀಡಿದ ದೂರಿನ ಪ್ರತಿ

ದೂರು ನೀಡಿದರೂ ಪೊಲೀಸ್ ನಿರ್ಲಕ್ಷ್ಯ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಮದುವೆಯ ಬೆನ್ನಲ್ಲೇ ಪೂರ್ವಯೋಜಿತ ದುಷ್ಟ ಕೂಟವೊಂದು ಚಿನ್ನಾಭರಣಗಳ ಸಹಿತ ನವ ವಧುವೊಬ್ಬಳನ್ನು ಬೆದರಿಸಿ ಅಪಹರಿಸಿ ನವದಂಪತಿಯನ್ನು ಬೇರ್ಪಡಿಸಿ ಸುಳ್ಯ ತಾಲೂಕಿನ ಮನೆಯೊಂದರಲ್ಲಿ ನಿಗೂಢ ಗೃಹಬಂಧನದಲ್ಲಿರಿಸಿ ಹಣದ ಬೇಡಿಕೆ ಮುಂದಿಡುತ್ತಿರುವ ವ್ಯಕ್ತಿಗಳ ವಿರುದ್ಧ ಪುದುವೆಟ್ಟು ಗ್ರಾಮದ ದಂಪತಿ ನ್ಯಾಯಕ್ಕಾಗಿ ದ ಕ ಎಸ್ಪಿ ಹಾಗೂ ಸುಬ್ರಹ್ಮಣ್ಯ, ಪುತ್ತೂರು ಪೊಲೀಸರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಗ್ರಾಮದ ಪ್ರೀತಿ ನಗರ ನಿವಾಸಿ ಸೂರ್ಯಕಾಂತ ಭಟ್ ಮತ್ತು ಮಾಲಾ ಭಟ್ ದಂಪತಿಯ ಪುತ್ರಿ ನವ ವಧು ವಂದನಾ (ಹೆಸರು ಬದಲಿಸಲಾಗಿದೆ) ಐದು ತಿಂಗಳ ಹಿಂದೆ ಮದುವೆಯ ಬೆನ್ನಲ್ಲೇ ಸುಳ್ಯ ತಾಲೂಕಿನ ಕಾವು ಸಮೀಪದ ನನ್ಯ ಪಟ್ಟಾಜೆ ನಿವಾಸಿ ರಾಜೇಶ್ ಬಳ್ಳಕ್ಕುರಾಯ, ಈತನ ಪತ್ನಿ ವಿನಯ ಹಾಗೂ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಸಮೀಪದ ಕಜ್ಜೋಡಿ ನಿವಾಸಿ ಎಸ್ ಶರತ್ ಎಂಬವರು ಅಪಹರಿಸಿ ಗಂಡನಿಂದಲೂ ಹೆತ್ತವರಿಂದಲೂ ಬೇರ್ಪಡಿಸಿ ಅಕ್ರಮವಾಗಿ ಗೃಹಬಂಧನದಲ್ಲಿರಿಸಿಕೊಂಡಿರುವ ಬಗ್ಗೆ ಎಸ್ಪಿ, ಸುಬ್ರಹ್ಮಣ್ಯ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ಹೆತ್ತವರು ಹೋಗಿ ಮಗಳನ್ನು ಕಳುಹಿಸುವಂತೆ ಕೇಳಿಕೊಂಡಾಗ ರಾಜೇಶ್ ಭಟ್ ಮತ್ತು ಮನೆಯವರು ಬಂಧೂಕು ತೋರಿಸಿ ಜೀವಬೆದರಿಕೆಯೊಡ್ಡಿದ್ದಾರೆ ಎಂದು ಎಸ್ಪಿಗೆ ನೀಡಿದ  ದೂರಿನಲ್ಲಿ ವಿವರಿಸಲಾಗಿದೆ.

ಧರ್ಮಸ್ಥಳ ಗ್ರಾಮದ ಪ್ರೀತಿ ನಗರ ನಿವಾಸಿ ಸೂರ್ಯಕಾಂತ ಭಟ್ ಮತ್ತು ಮಾಲಾ ಭಟ್ ದಂಪತಿಯ ಪುತ್ರಿ ವಂದನಾರ ಮದುವೆ ಉಜಿರೆ ನಿವಾಸಿ ಉಷಾ ರಾವ್ ಎಂಬವರ ಪುತ್ರ ಸುಬ್ರಹ್ಮಣ್ಯ ಎಂಬವರೊಂದಿಗೆ 2016ರ ಜುಲೈ 13ರಂದು ಉಜಿರೆಯ ಸೀತಾರಾಮ ಕಲಾ ಮಂದಿರದಲ್ಲಿ ನಡೆದಿತ್ತು.

ಆಗಸ್ಟ್ 16ರಂದು ಆತ್ಮೀಯ ಸಂಬಂಧಿಕರ ಸೋಗಿನಲ್ಲಿ ರಾಜೇಶ್, ಆತನ ಪತ್ನಿ ವಧುವಿನ ಚಿಕ್ಕಮ್ಮ ವಿನಯ ಹಾಗೂ ಎಸ್ ಶರತ್ ಎಂಬವರು ಸೇರಿಕೊಂಡು ಸಂಚು ನಡೆಸಿ ನವ ವಧು ವಂದನಾರನ್ನು ದುರುದ್ದೇಶದಿಂದ, ಸುಳ್ಳು ಮಾತುಗಳಿಂದ ನಂಬಿಸಿ ಪತಿ ಸುಬ್ರಹ್ಮಣ್ಯರಿಂದಲೂ, ಹೆತ್ತವರಿಂದಲೂ ಬೇರ್ಪಡಿಸಿ ಮಾನಸಿಕ ಹಿಂಸೆ ನೀಡುತ್ತಿದ್ದು, ಗೃಹಬಂಧನದಲ್ಲಿರಿಸಿದ್ದಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಾಯಿ ಮಾಲಾ ಭಟ್ ಹಾಗೂ ನವ ವಧುವಿನ ಪತಿಯ ತಾಯಿ ಉಷಾ ರಾವ್ ಆರೋಪಿಸಿದ್ದಾರೆ.

ನವವಧುವನ್ನು ಗೃಹಬಂಧನದಲ್ಲಿಟ್ಟಿರುವ ವ್ಯಕ್ತಿಗಳು ವಂದನಾರ ತಾಯಿಗೆ ದೂರವಾಣಿ ಕರೆ ಮಾಡಿ “ನೀನು 20 ಲಕ್ಷ ರೂಪಾಯಿ ಕೊಡದಿದ್ದಲ್ಲಿ ನಿನ್ನ ಮಗಳನ್ನು ಮಾರಾಟ ಮಾಡುತ್ತೇವೆ” ಎಂದು ಬೆದರಿಸುತ್ತಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ನವವಧು ವಂದನಾರನ್ನು ಅಪಹರಿಸುವ ಸಂಚು ರೂಪಿಸಿದವರಲ್ಲಿ ಪ್ರಮುಖನೆನ್ನಲಾದ ರಾಜೇಶ್ ವಿವಾಹಿತನಾಗಿದ್ದು, ಮದುವೆಗೂ ಮೊದಲೇ ಬೇರೆ ಬೇರೆ ನೆಪದಲ್ಲಿ ಮನೆಗೆ ಬರುತ್ತಿದ್ದು ವಂದನಾರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿದ್ದ. ಆತನ ಸಂಚಿಗೆ ಬಲಿಯಾಗಿ ಇದೀಗ ಗೃಹಬಂಧನದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದು, ಆಕೆಯ ಜೀವಕ್ಕೆ ಅಪಾಯವಿದೆ ಎಂದು ಹೆತ್ತವರು ಆರೋಪಿಸಿದ್ದು, ಇಷ್ಟೊಂದು ಗಂಭೀರ ಪ್ರಕರಣದ ಬಗ್ಗೆ ಪೊಲೀಸರು ನಿರ್ಲಕ್ಷಿಸುತ್ತಿರುವುದು ನವದಂಪತಿಯ ಹೆತ್ತವರ ಸಂಶಯಕ್ಕೂ, ಆತಂಕಕ್ಕೂ ಕಾರಣವಾಗಿದೆ.