ಅಮ್ಮ, ಅಣ್ಣನ ಸಾವಿಗೆ ಅತ್ತಿಗೆಯೇ ಕಾರಣ : ಬದುಕುಳಿದ ನಾದಿನಿಯಿಂದ ನೇರ ಆರೋಪ

ಆತ್ಮಹತ್ಯೆ ಯತ್ನದಲ್ಲಿ ಮೂವರ ಪೈಕಿ ಇಬ್ಬರು ಸತ್ತ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ನಮ್ಮ ಆತ್ಮಹತ್ಯೆ ಯತ್ನಕ್ಕೆ ಅಣ್ಣನ ಪತ್ನಿ ಆಶಾ ಹಾಗೂ ಆಕೆಯ ಸ್ನೇಹಿತೆ ಸುನೀತಾ ಕಾರಣ. ನನ್ನ ಅಣ್ಣನನ್ನು ಆಕೆ ಇನ್ನಿಲ್ಲದಂತೆ ಕಾಡಿದಳು. ಅದಕ್ಕೆ ಆಕೆಯ ಗೆಳತಿ ಕೂಡಾ ಸಾಥ್ ನೀಡಿ ಅಣ್ಣನಿಗೆ ಮಾನಸಿಕ ಹಿಂಸೆ ನೀಡಿದಳು. ಆತನ ಸಾವಿಗೆ ಆಕೆಯೇ ನೇರ ಕಾರಣ” ಎಂದು ಪೆರ್ಮುದೆಯಲ್ಲಿ ನಡೆದ ಆತ್ಯಹತ್ಯೆ ಯತ್ನ ಘಟನೆಯಲ್ಲಿ ಬದುಕುಳಿದ ಶೋಭಾ ಆರೋಪಿಸಿದ್ದಾರೆ.

ಪೆರ್ಮುದೆ ನಿವಾಸಿ ತಾಯಿ ಜಯಗೋಪಿ (66) ಜೊತೆ ಮನೆ ಬಾವಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿ ಸಾವನ್ನಪ್ಪಿದ್ದರು. ಆದರೆ ಇವರ ಜೊತೆಗೇ ಬಾವಿಗೆ ಹಾರಿದ್ದ ಶೋಭಾ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದರು. ಆದರೆ ತಾಯಿ, ತಂಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಘಾತಕ್ಕೆ ಒಳಗಾಗಿದ್ದ ಸುರೇಶ್ (46) ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಸಾವಿಗೀಡಾಗುವ ಮುನ್ನ ಅವರು ಗೋಡೆ ಮೇಲೆ ಬರೆದಿಟ್ಟಿದ್ದ ಡೆತ್ ನೋಟಿನಲ್ಲಿ ತನ್ನ ಪತ್ನಿ ಆಶಾ ಹಾಗೂ ಆಕೆಯ ಗೆಳತಿ ಸುನಿತಾ ಹೆಸರು ಅಪರಾಧಿಗಳೆಂಳದು ಉಲ್ಲೇಖಿಸಿದ್ದರು.

“ನನ್ನ ಅಣ್ಣ ಗೋಡೆಯಲ್ಲಿ ಸತ್ಯ ವಿಷಯವನ್ನೇ ಬರೆದಿಟ್ಟಿದ್ದಾನೆ” ಎಂದ ಶೋಭಾ,  ಘಟನೆಗೆ ಕಾರಣರಾದವರ ಬಗ್ಗೆ ಗೋಡೆ ಮೇಲೆ ಡೆತ್‍ನೋಟ್ ಬರೆದಿಟ್ಟಿರುವುದನ್ನು ಸಹೋದರಿ ಶೋಭಾ ಸಮರ್ಥಿಸಿದ್ದಾರೆ.

“ಒಂದೂವರೆ ತಿಂಗಳ ಹಿಂದೆ ಅಣ್ಣ ಸುರೇಶ್ ಯಾರಿಗೂ ಹೇಳದೆ ಪ್ರೀತಿಸಿದ ಹುಡುಗಿ ಆಶಾ ಜೊತೆ ಮದುವೆಯಾಗಿದ್ದ. ನಮ್ಮ ಮನೆಗೂ ಈ ವಿಚಾರವನ್ನು ತಿಳಿಸಿರಲಿಲ್ಲ. ಹೀಗಿದ್ದರೂ ನಾವು ಅವನನ್ನು, ನಮ್ಮ ಅತ್ತಿಗೆಯನ್ನು ಅಷ್ಟೇ ಪ್ರೀತಿಯಿಂದ ಬರಮಾಡಿಕೊಂಡಿದ್ದೆವು. ಆದರೆ ಪೆರ್ಮದೆಯ ಮನೆಗೆ ಬಂದ ಅಶಾ ಅಣ್ಣ ಸೇರಿದಂತೆ ಇಡೀ ಕುಟುಂಬಕ್ಕೆ ಹಿಂಸೆ ನೀಡುತ್ತಿದ್ದಳು. ಸಣ್ಣ ಸಣ್ಣ ವಿಚಾರಕ್ಕೂ ಗಲಾಟೆ ಮಾಡುತ್ತಿದ್ದಳು. ದಿನನಿತ್ಯ ರೇಗಾಡುತ್ತಿದ್ದಳು. ಕಾಲ್ಕೆರೆದು ಜಗಳಕ್ಕೆ ಬರುತ್ತಿದ್ದಳು” ಎಂದು ಶೋಭಾ ಹೇಳಿದ್ದಾರೆ.

ಸುರೇಶನ ಪತ್ನಿ ಆಶಾಳ ಅತ್ಯಂತ ಆಪ್ತೆ ಸ್ನೇಹಿತೆಯಾಗಿದ್ದ ಸುನೀತಾ, ಆಶಾ ಮಾಡುವ ಎಲ್ಲಾ ಕೆಲಸಗಳಿಗೂ ಬೆಂಬಲವಾಗಿದ್ದಳು. ಅತ್ತಿಗೆ ಜೊತೆಗೆ ಸೇರಿಕೊಂಡು ಆಕೆ ಅಣ್ಣನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಇವರಿಬ್ಬರೂ ನಮ್ಮ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದು ಶೋಭಾ ಆರೋಪಿಸಿದ್ದಾರೆ.

ಜಾಗದ ತಕರಾರು

 ಆತ್ಮಹತ್ಯೆ ಮಾಡಿಕೊಳ್ಳಲು ಜಾಗದ ತಕರಾರೇ ಕಾರಣ ಎಂದು ಹೇಳಲಾಗುತ್ತಿದೆ. ಪ್ರೀತಿಸಿ ಮದುವೆಯಾಗಿದ್ದ ಸುರೇಶ ತನ್ನ ಪತ್ನಿ ಆಶಾಳಿಗೆ ಮಣಿಪಾಲದಲ್ಲಿ ಒಂದು ನಿವೇಶನವನ್ನು ಸಾಲಸೋಲ ಮಾಡಿ ಖರೀದಿಸಿ ಮನೆಮಾಡಿಕೊಟ್ಟಿದ್ದ. ಕಟ್ಟಿಸಿಕೊಂಡಿದ್ದ. ಈ ಮನೆಯಲ್ಲೇ ಸುರೇಶ, ಆಶಾ ಹಾಗೂ ಈಕೆಯ ಸ್ನೇಹಿತೆ ಸುನೀತಾ ಇರುತ್ತಿದ್ದರು. ಮಣಿಪಾಲದ ಪ್ರಗತಿನಗರದ ಜಾಗದಲ್ಲಿ ಹಕ್ಕನ್ನು ಕೇಳಿರುವುದೇ ಮನೆಯೊಳಗಿನ ಕಲಹಕ್ಕೆ ಕಾರಣವಾಗಿರಬೇಕೆನ್ನಲಾಗುತ್ತಿದೆ.

ಒಂದು ವಾರಕ್ಕೂ ಮೊದಲೇ ಸುರೇಶ ಪತ್ನಿ ಆಶಾ ಮನೆ ತೊರೆದಿದ್ದಳು ಎನ್ನುವ ಸುದ್ದಿ ಸ್ಥಳೀಯ ಪೊಲೀಸರಿಗೆ ತನಿಖೆ ವೇಳೆ ಗೊತ್ತಾಗಿದೆ.

ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಮೂವರೂ ಆತ್ಮಹತ್ಯೆ ಯತ್ನಿಸಿ ಇಬ್ಬರು ಅಸುನೀಗಿರುವುದು ಪೆರ್ಮುದೆ ಪರಿಸರದಲ್ಲೇ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಕರಣ ಶೀಘ್ರವೇ ಬೇಧಿಸಿ, ನೈಜ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಅಗತ್ಯವಿದೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.