ನಗರಸಭೆ ಸದಸ್ಯರಿಂದ ಹಲ್ಲೆ ಆರೋಪಕ್ಕೆ ಹೊಸ ತಿರುವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಉಳ್ಳಾಲ ನಗರಸಭೆ ಸದಸ್ಯ ಬಾಝಿಲ್ ಡಿಸೋಜ ಅವರು ಯುವಕನೊಬ್ಬಗೆ ಹಲ್ಲೆ ನಡೆಸಿದ್ದಾರೆ ಎನ್ನುವ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸ್ಥಳೀಯ ಉದ್ಯಮಿಗೆ ಗೂಡಂಗಡಿಗಳನ್ನು ತೆರವುಗೊಳಿಸಲು ಬಿಡದ ಹಿನ್ನೆಲೆಯಲ್ಲಿ ಹಲ್ಲೆ ಆರೋಪ ಮಾಡಿ ದೂರು ನೀಡಲಾಗಿದೆ ಎಂದು ಗೂಡಂಗಡಿಗಳನ್ನು ಕಳೆದುಕೊಂಡಿರುವ ಬಾಬು ಡಿಸೋಜ, ಎಂ ಕೆ ಇಪ್ತಿಕಾರ್ ಹಾಗೂ ವಸಂತ್ ಎಂಬವರು ಆರೋಪಿಸಿದ್ದಾರೆ.

ತೊಕ್ಕೊಟ್ಟು ಜಂಕ್ಷನಿನಲ್ಲಿ ಹಲವು ವರ್ಷಗಳಿಂದ ಮೂರು ಗೂಡಂಗಡಿಗಳು ಕಾರ್ಯಾಚರಿಸುತ್ತಿದ್ದು, ಇತ್ತೀಚೆಗೆ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ರಸ್ತೆ ಪಕ್ಕದ ಗೂಡಂಗಡಿಗಳನ್ನು ತೆರವುಗೊಳಿಸಲಾಗಿತ್ತು. ರಾ ಹೆ 66ರ ರಸ್ತೆಬದಿಯಲ್ಲಿ ಇರುವ ಸಾಗರ್ ಬಟ್ಟೆ ಮಳಿಗೆಯವರಿಗೆ ಸೇರಿದ ಕಟ್ಟಡವೂ ಅಂಗಡಿಗಳ ಸಮೀಪದಲ್ಲೇ ಇದ್ದು, ಗೂಡಂಗಡಿ ಇರುವ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲು ಆರಂಭಿಸಿರುವುದಕ್ಕೆ ಬಾಝಿಲ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಚಾರದಲ್ಲೇ ಬಾಝಿಲ್ ಡಿಸೋಜ ಮತ್ತು ಅಂಗಡಿ ಮಾಲಕರ ನಡುವೆ ವಿವಾದಕ್ಕೆ ಕಾರಣವಾಗಿತ್ತು. ಶನಿವಾರ ಕಲ್ಲಾಪು ವಾರ್ಡಿನ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ಸೇರಿದಂತೆ ತಂಡವೊಂದು ಗೂಡಂಗಡಿಗಳ ಬಳಿ ಬಂದು ತೆರವುಗೊಳಿಸುವಂತೆ ಒತ್ತಡ ಹೇರಿ, ಗೂಡಂಗಡಿಯೊಳಗಿದ್ದ ಸಾಮಗ್ರಿಗಳೆಲ್ಲವನ್ನೂ ಹೊರಗೆಸೆದಿದ್ದರು. ಆದರೆ ನಗರಸಭೆ ಸದಸ್ಯ ಬಾಝಿಲ್ ಡಿಸೋಜಾ ಅವರು ಎಲ್ಲರೂ ಬಡ ವರ್ಗದವರೇ ಆಗಿರುವುದರಿಂದ ಗೂಡಂಗಡಿಗಳನ್ನು ಇಡುವಂತೆ ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಸಹಿಸದೇ ಬಟ್ಟೆ ಮಳಿಗೆ ಅಂಗಡಿ ಮಾಲಕರು ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಉದ್ಯಮಿ ಹಾಗೂ ನಗರಸಭೆ ಕಲ್ಲಾಪು ವಾರ್ಡಿನ ಸದಸ್ಯರು ಸೇರಿಕೊಂಡು ಸರಕಾರಿ ಜಾಗವನ್ನು ಕಬಳಿಸುವ ಹುನ್ನಾರ ಮಾಡಿ, ಬಾಝಿಲ್ ವಿರುದ್ಧ ಕಪೋಲಕಲ್ಪಿತ ದೂರು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.