ಮಾರ್ಚ್ ತಿಂಗಳಲ್ಲಿ ಹೊಸ ಮೇಯರ್, ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲು

ವಿಶೇಷ ವರದಿ

ಮಂಗಳೂರು : ಕರಾಟೆ ಚಾಂಪಿಯನ್ ಕವಿತಾ ಸನಿಲ್ ಮಂಗಳೂರು ಮಹಾನಗರಪಾಲಿಕೆಯ ಮುಂದಿನ ಮೇಯರ್ ಆಗುವ ಸಂಭಾವ್ಯತೆ ಹೆಚ್ಚಿದ್ದರೂ ಹಿರಿಯ ಮನಪಾ ಸದಸ್ಯೆ ಅಪ್ಪಿ ಮತ್ತು ಕಿರಿಯ ಸದಸ್ಯೆ ಪ್ರತಿಭಾ ಕುಳಾಯಿ ಅವರು ಮೇಯರ್ ಹುದ್ದೆಯ ಜಂಗೀ ಕುಸ್ತಿಗೆ ಇಳಿದಿರುವುದು ಗುಟ್ಟಾಗಿ ಉಳಿದಿಲ್ಲ.

ಮುಂದಿನ ಬಾರಿಯ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀಸಲಿರಿಸಲಾಗಿದ್ದು, ಉಪಮೇಯರ್ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ಇರಿಸಲಾಗಿದೆ.

ಮೇಯರ್ ಸ್ಥಾನಕ್ಕೆ ಆಡಳಿತರೂಢ ಕಾಂಗ್ರೆಸ್ ಪಕ್ಷದ ಹದಿನಾಲ್ಕು ಮಂದಿ ಮಹಿಳಾ ಅಭ್ಯರ್ಥಿಗಳು ಅರ್ಹತೆಯನ್ನು ಪಡೆದುಕೊಂಡಿದ್ದರೂ, ಕುಳಾಯಿಯ ಪ್ರತಿಭಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ  ಕವಿತಾ ಸನೀಲ್, ಹಿರಿಯ ಮನಪಾ ಸದಸ್ಯೆ ಅಪ್ಪಿ ಅವರು ಹೆಸರು ಮಂಚೂಣಿಯಲ್ಲಿದೆ.

ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಇಬ್ಬರು ಶಾಸಕರಾದ ಮೌಯ್ದೀನ್ ಬಾವ ಮತ್ತು ಜೆ ಆರ್ ಲೋಬೊ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರಿದ್ದರೂ ಮೇಯರ್ ಆಯ್ಕೆ ಅಂತಿಮವಾಗಿ ತೀರ್ಮಾನ ಮಾಡುವ ವಿಟೋ ಪವರ್ ಹೊಂದಿರುವುದು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ ರಮಾನಾಥ ರೈ.

ಮಂಗಳೂರಿನ ಕಾಂಗ್ರೆಸ್ ಹೈಕಮಾಂಡ್ ರಮಾನಾಥ ರೈ ಅವರ ಆಪ್ತರು ಶಿಫಾರಸು ಮಾಡುವ ಮಹಿಳೆಯೇ ಮುಂದಿನ ಮೇಯರ್ ಆಗುವ ಹಿನ್ನೆಲೆಯಲ್ಲಿ ಕವಿತಾ ಸನೀಲ್ ಅಂತಹ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಪಾಲಿಕೆಯ ಅಧಿಕಾರಿಗಳಲು ಹೇಳುತ್ತಾರೆ.

ಕಾಂಗ್ರೆಸ್ ಪಕ್ಷದ ವಲಯದಲ್ಲಿ ಪ್ರತಿಭಾ ಕುಳಾಯಿ ಅವಕಾಶ ಪಡೆಯುವ ಸಾಧ್ಯತೆ ಇದ್ದು, ಶಾಸಕ ಮೋಯ್ದೀನ್ ಬಾವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟವರ್ತಿ ಆಗಿರುವ ಕಾರಣ ಸೂಪರ್ ವಿಟೋ ಪವರ್ ಉಪಯೋಗಿಸಿ ಪ್ರತಿಭಾ ಅವರನ್ನು ಮೇಯರ್ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಇದೀಗ ಮುಖ್ಯಮಂತ್ರಿ ಅವರು ಶಾಸಕ ಬಾವ ಅವರನ್ನು ದೇವೇಗೌಡರ ನಂಟಿನ ಕಾರಣಕ್ಕಾಗಿ ದೂರ ಇರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಅಪ್ಪಿ ಅವರಿಗೆ ಮೇಯರ್ ಸ್ಥಾನ ತಪ್ಪಿಸಲೆಂದೇ ಹಿರಿಯ ಸದಸ್ಯರಾದ ಶಶಿಧರ ಹೆಗ್ಡೆ ಮತ್ತಿತರರು ಕೆಲಸ ಮಾಡಿದ್ದಾರೆ ಎಂಬ ಗುಮಾನಿ ಕೂಡ ಇದೆ.

ಅಪ್ಪಿ ಅವರಿಗೆ ಮೇಯರ್ ಸ್ಥಾನ ನೀಡುವುದಕ್ಕೆ ಅವರ ಸಮುದಾಯದವರೇ ವಿರೋಧ ಇದೆ ಎಂದು ಉಸ್ತುವಾರಿ ಸಚಿವರಿಗೆ ಕೆಲವರು ತಪ್ಪು ಸಂದೇಶ ನೀಡಿದ್ದಾರೆ ಎನ್ನಲಾಗಿದೆ.