ಉಡುಪಿ ನಗರಪಾಲಿಕೆಯಿಂದ ಹೊಸ ಘನ ತ್ಯಾಜ್ಯ ನಿರ್ವಹಣಾ ಯೋಜನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ನಗರಪಾಲಿಕೆಯು ನಗರಕ್ಕಾಗಿ `ನಗರಪಾಲಿಕೆ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ’ ಎಂಬ ಹೊಸ ಯೋಜನೆಯನ್ನು ಪ್ರಸ್ತಾವಿಸಿದೆ. ವಿವಿಧ ತಂತ್ರಗಳನ್ನು ಬಳಸಿಕೊಂಡು ಸಂಪೂರ್ಣ ತ್ಯಾಜ್ಯ ನಿರ್ವಹಣೆ ಮಾಡುವುದೇ ಈ ವ್ಯವಸ್ಥೆಯ ಉದ್ದೇಶವಾಗಿದೆ.

ಕಾಂಪೋಸ್ಟು ಪೈಪ್ ಅಥವಾ ಇತರ ಯಾವುದೇ ಕಾಂಪೋಸ್ಟು ವ್ಯವಸ್ಥೆ ಬಳಸಿಕೊಂಡು ಪ್ರತಿ ಮನೆ ಅಥವಾ ಅಪಾರ್ಟ್‍ಮೆಂಟಿನ ತ್ಯಾಜ್ಯವನ್ನು  ಸಾಧ್ಯವಾದಷ್ಟು ವಿಲೇವಾರಿ ಮಾಡುವುದು ಈ ಪ್ರಸ್ತಾವನೆಯ ಗುರಿ. ಈ ಯೋಜನೆಯ ವೆಚ್ಚ ಅಂದಾಜು ರೂ 13.5 ಕೋಟಿ. ನಿರ್ವಹಣಾ ವೆಚ್ಚ ಪ್ರತಿ ವರ್ಷಕ್ಕೆ ಸುಮಾರು ರೂ 10 ಕೋಟಿ. ಈ ಎಲ್ಲ ವೆಚ್ಚವನ್ನು ಉಡುಪಿ ನಗರಪಾಲಿಕೆ ಭರಿಸಲಿದೆ.

ಹೊಸ ವ್ಯವಸ್ಥೆಯ ಪ್ರಕಾರ ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯ ಪ್ರತ್ಯೇಕಿಸಿಡಬೇಕು. ಹಸಿ ತ್ಯಾಜ್ಯವನ್ನು ವಾರಕ್ಕೆ ಒಂದು ಬಾರಿ ಮತ್ತು ಒಣ ತ್ಯಾಜ್ಯವನ್ನು ಪ್ರತಿದಿನ ವಿಲೇವಾರಿ ಮಾಡಲಾಗುವುದು.

ಸಂಗ್ರಹಿಸಿದ ತ್ಯಾಜ್ಯ ಸಾಗಿಸಲು ನಗರಪಾಲಿಕೆಯಲ್ಲಿ ಕೇವಲ 18 ವಾಹನಗಳಿವೆ. ಉಡುಪಿ ನಗರಪಾಲಿಕೆ ಈಗಾಗಲೇ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಅನುಸರಿಸುತ್ತಿದೆ.

“ಯೋಜನೆ ಡಿಪಿಆರ್ ಸಿದ್ಧವಾಗಿದೆ, ಇದನ್ನು ಸದ್ಯದಲ್ಲೇ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಗೆ ಕಳುಹಿಸಲಾಗುವುದು. ಇದನ್ನು ಪರೀಕ್ಷಿಸಿ, ತಪ್ಪುಗಳಿದ್ದಲ್ಲಿ ಸರಿಪಡಿಸಿ ಸಮಿತಿ ಸಲಹೆಗಳನ್ನು ನೀಡುತ್ತದೆ. ಆ ಪ್ರಕಾರ ತಪ್ಪುಗಳನ್ನು ಸರಿಪಡಿಸಿ ಮರು ಕಳುಹಿಸಿದರೆ ಯೋಜನೆಗೆ ತಾಂತ್ರಿಕ ಪರಿಣತರು ಅನುಮತಿ ನೀಡಲಿದ್ದಾರೆ. ಆ ಬಳಿಕ ಆಡಳಿತಾತ್ಮಕ ಸಮಿತಿಯ ಅನುಮತಿ ಅವಶ್ಯಕತೆ ಇದೆ. ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳನ್ನು ಬಿಡುಗಡೆಗೊಳಿಸಲಿವೆ. ಇದರೊಂದಿಗೆ ನಗಪಾಲಿಕೆ ತನ್ನ ಪಾಲು ಕೂಡ ನೀಡಲಿದೆ”’ ಎಂದು ಪರಿಸರ ಇಂಜಿನಿಯರ್ ರಾಘವೇಂದ್ರ ಹೇಳಿದ್ದಾರೆ.