ಶೀಘ್ರದಲ್ಲೇ ಮಂಗಳೂರು -ಬೆಂಗಳೂರು ನಡುವೆ ನೂತನ ಹಗಲು ರೈಲು ಓಡಾಟ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರಾವಳಿ ಭಾಗದ ಮಂದಿಯ ಬಹಳ ವರ್ಷಗಳ ಬೇಡಿಕೆಯಾಗಿರುವ ಮಂಗಳೂರು-ಬೆಂಗಳೂರು ನಡುವಿನ ರೈಲು ಓಡಾಟ ಬರುವ ಮಾರ್ಚಿಯಲ್ಲಿ ಪ್ರಾರಂಭಗೊಳ್ಳಲಿದೆ ಎಂದು ರೈಲ್ವೇ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

ಕೇಂದ್ರದಲ್ಲಿ ರೈಲ್ವೇ ಖಾತೆ ಸಚಿವರಾಗಿದ್ದ ಸದಾನಂದ ಗೌಡ ಅವರು 2014ರಲ್ಲಿ ಮಂಡಿಸಿದ ರೈಲ್ವೇ ಬಜೆಟ್‍ನಲ್ಲಿ ಈ ರೈಲು ಓಡಿಸುವುದಾಗಿ ಘೋಷಣೆ ಮಾಡಿದ್ದರು. ಹೀಗಿದ್ದರೂ ಈ ಪ್ರಸ್ತಾಪವನ್ನು ರೈಲ್ವೇ ಇಲಾಖೆ ನಿರ್ಲಕ್ಷ್ಯಿಸಿತ್ತು. ಆದರೂ ಪಟ್ಟುಬಿಡದ ಉಡುಪಿ ರೈಲ್ವೇ ಯಾತ್ರಿ ಸಂಘದ ಪದಾಧಿಕಾರಿಗಳು ಹೈಕೋರ್ಟ್ ಮೆಟ್ಟಲೇರಿ ಈ ಮಾರ್ಗದ ಮೂಲಕ ರೈಲು ಓಡಿಸುವಂತೆ ಒತ್ತಡ ಹೇರಿದ್ದರು. ಕೊನೆಗೆ ಅನಿವಾರ್ಯ ಎಂಬಂತೆ ಬಜೆಟ್ಟಿನಲ್ಲಿ ಘೋಷಣೆ ಮಾಡಿದನ್ವಯ ಇದನ್ನು ಜಾರಿಗೊಳಿಸಲು ಇಲಾಖೆ ಮುಂದಾಗಿತ್ತು. ಇತ್ತೀಚೆಗೆ ನಡೆದ ರೈಲ್ವೇ ಬೋರ್ಡ್ ಮಂಡಳಿ ಸಭೆಯಲ್ಲಿ ಕೂಡಾ ಈ ಮಾರ್ಗದ ಮೂಲಕ ಹಗಲು ರೈಲು ಓಡಾಟಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೇ ಮೂಲಗಳಿಂದ ತಿಳಿದುಬಂದಿದೆ. ಇನ್ನು ಈ ನಿರ್ಧಾರಕ್ಕೆ ಸಂಬಂಧಿಸಿ ರೈಲ್ವೇ ಸಚಿವಾಲಯವು ಹೈಕೋರ್ಟಿಗೆ ಶೀಘ್ರದಲ್ಲೇ ಅಫಿದಾವಿತ್ ಸಲ್ಲಿಸಲಿದೆ ಎನ್ನಲಾಗಿದೆ.

2015ರಲ್ಲಿ ಮಂಗಳೂರು-ಬೆಂಗಳೂರು ನಡುವೆ ನೂತನ ರೈಲು ಓಡಾಟ ಘೋಷಣೆ ಮಾಡಲಾಗಿತ್ತು. 16575/16576 ನಂಬ್ರದ ರೈಲು ಬೆಂಗಳೂರಿನಿಂದ 8.30ಕ್ಕೆ ಹೊರಟು ಸಂಜೆ 6.30ಕ್ಕೆ ಮಂಗಳೂರು ತಲುಪುತ್ತಿತ್ತು. ನೂತನ ರೈಲು ಓಡಾಟಕ್ಕೆ ರೈಲ್ವೇ ಸುರಕ್ಷಾ ಕಮಿಷನರ್  ಅನುಮತಿ ಈಗಾಗಲೇ ಸಿಕ್ಕಿದೆ ಎಂದು ತಿಳಿದುಬಂದಿದೆ.