ಖಾಸಗಿ ಬ್ಯಾಂಕುಗಳಿಗೆ ಹರಿಯಿತು ಹೊಸ ನೋಟು

ವಿಶೇಷ ವರದಿ

ಮಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ ಬಹುದೊಡ್ಡ ಮೊತ್ತದ ಹೊಸ ನೋಟುಗಳ ಕಟ್ಟನ್ನು ಖಾಸಗಿ ವಲಯದ ಬ್ಯಾಂಕುಗಳಿಗೆ ನೀಡಿರುವುದೇ ಧನಿಕರು ಮತ್ತು ಭ್ರಷ್ಟ ಅಧಿಕಾರಿಗಳಲ್ಲಿ ಎರಡು ಸಾವಿರ ರೂಪಾಯಿ ಮೌಲ್ಯದ ಹೊಸ ನೋಟುಗಳು ಸಂಗ್ರಹ ಆಗಲು ಕಾರಣವಾಗಿದೆ.

ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಧನಿಕರ ಮನೆಯಲ್ಲಿ ಹೊಸ ನೋಟುಗಳ ದೊಡ್ಡ ಪ್ರಮಾಣದ ಸಂಗ್ರಹ ಪತ್ತೆಯಾಗಿದೆ. ಅದರೊಂದಿಗೆ ಕೆಲವು ಖಾಸಗಿ ವಲಯದ ಬ್ಯಾಂಕು ಅಧಿಕಾರಿಗಳ ಬಂಧನವಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಅಧಿಕಾರಿಗಳ ವರ್ಗಾವಣೆ ಮತ್ತು ಅಮಾನತು ಕೂಡ ನಡೆದಿದೆ.

ಬ್ಯಾಂಕು ಅಧಿಕಾರಿಗಳು ಶಾಮೀಲಾದ ಪರಿಣಾಮವೇ ಹಲವು ಮಂದಿ ಕಾಳಧನಿಕರು, ಭ್ರಷ್ಟ ಅಧಿಕಾರಿಗಳು ಹೊಸ ನೋಟುಗಳ ದೊಡ್ಡ ಪ್ರಮಾಣದ ಸಂಗ್ರಹ ಮಾಡಿದ್ದಾರೆ ಎಂಬುದು ಸರ್ವವಿದಿತವಾಗಿದೆ.

ಇದರೊಂದಿಗೆ ದೇಶದ ರಿಸರ್ವ್ ಬ್ಯಾಂಕ್ ಕೂಡ ಕಡಿಮೆ ಸಂಖ್ಯೆಯ ಬ್ಯಾಂಕ್ ಶಾಖೆಗಳು ಇದ್ದರೂ ದೊಡ್ಡ ಮೊತ್ತದ ಹೊಸ ನೋಟುಗಳನ್ನು ಖಾಸಗಿ ಬ್ಯಾಂಕುಗಳಿಗೆ ನೀಡಿವೆ ಎಂಬುದು ಇದೀಗ ಬೆಳಕಿಗೆ ಬರುತ್ತಿರುವ ವಿಚಾರವಾಗಿದೆ.

ಮಂಗಳೂರು ನಗರದಲ್ಲಿ ಐಸಿಐಸಿಐ, ಎಕ್ಸಿಸ್ ಬ್ಯಾಂಕಿನಂತಹ ಖಾಸಗಿ ಬ್ಯಾಂಕುಗಳ ಶಾಖೆಗಳ ಸಂಖ್ಯೆ ಕಡಿಮೆ ಇದ್ದರೂ, ಹೆಚ್ಚು ಶಾಖೆಗಳನ್ನು ಹೊಂದಿರುವ ಕೆನರಾ, ಕಾಪೆರ್Çೀರೇಶನ್, ಸ್ಟೇಟ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಮುಂತಾದ ಸಾರ್ವಜನಿಕ ವಲಯದ ಬ್ಯಾಂಕುಗಳ ಶಾಖೆ ಹೆಚ್ಚು ಇದ್ದರೂ ಒಂದೇ ಪ್ರಮಾಣದ ಹೊಸ ನೋಚುಗಳನ್ನು ವಿತರಣೆ ಮಾಡಿರುವುದು ಭಾರೀ ಸಂಶಯಕ್ಕೆ ಕಾರಣವಾಗಿದೆ.

ಖಾಸಗಿ ಬ್ಯಾಂಕುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆರಳೆಣಿಕೆ ಶಾಖೆಗಳನ್ನು ಹೊಂದಿದ್ದು, ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಶಾಖೆಯನ್ನೇ ಹೊಂದಿಲ್ಲ. ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳು ತಲಾ ಇಪ್ಪತ್ತೈದಕ್ಕಿಂತ ಹೆಚ್ಚು ಶಾಖೆಗಳನ್ನು ಹೊಂದಿದ್ದರೂ ಎಲ್ಲರಿಗೂ ಸಮಾನ ಮೊತ್ತದ ಹೊಸ ಕರೆನ್ಸಿ ನೋಟು ವಿತರಣೆ ಮಾಡಿರುವುದು ಕೇಂದ್ರ ಸರಕಾರದ ನೋಟು ಅಮಾನ್ಯ ಕ್ರಮದ ಬಗ್ಗೆ ಸಂಶಯವನ್ನು ಹುಟ್ಟುಹಾಕಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 625ಕ್ಕಿಂತ ಹೆಚ್ಚು ಬ್ಯಾಂಕು ಶಾಖೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆ ಹೆಚ್ಚಿದೆ. ಖಾಸಗಿ ವಲಯದ ಹೊಸ ತಲೆಮಾರಿನ ಬ್ಯಾಂಕುಗಳು ಮಹಾನಗರಪಾಲಿಕೆ ವ್ಯಾಪ್ತಿಯ ಹೊರಗೆ ವ್ಯವಹಾರವನ್ನೇ ಮಾಡುವುದಿಲ್ಲ. ಹಾಗಿದ್ದರೂ ಹೊಸ ನೋಟುಗಳ ವಿತರಣೆಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೇ ಸರಕಾರವೇ ತಾರತಮ್ಯ ಮಾಡಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಇಂತಹ ಕ್ರಮದಿಂದ ಕಾಳಸಂತೆ ಧನಿಕರು ಹೊಸ ನೋಟುಗಳ ಸಂಗ್ರಹ ಮಾಡಲು ಸಹಾಯವಾಗಿದೆ.

ಇದಕ್ಕೆ ಪೂರಕವಾಗಿ ದೆಹಲಿಯಲ್ಲಿ ಎಕ್ಸಿಸ್ ಬ್ಯಾಂಕಿನ ಇಬ್ಬರು ಅಧಿಕಾರಿಗಳ ಬಂಧನವಾಗಿದೆ. ಅವರು ಹೊಸ ನೋಟುಗಳನ್ನು ಮೇಜಿನ ಅಡಿಯಿಂದ ರಾಜರೋಷವಾಗಿ ಕಾಳಧನ ಬದಲಾವಣೆ ಮಾಡುತ್ತಿದ್ದರು.

ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿದ್ದರೂ ರಾಜಕೀಯ ಪಕ್ಷಗಳು ಮಾತ್ರ ಜನಹಿತ ಮರೆತು ಸುಮ್ಮನಿರುವುದು ಇನ್ನಷ್ಟು ಸಂಶಯಕ್ಕೆ ಕಾರಣವಾಗಿದೆ.