9 ದಶಕಗಳಿಂದ ಇದ್ದ `ನ್ಯೂಚಿತ’್ರ ಚಿತ್ರ ಮಂದಿರ ಇದೀಗ ಫರ್ನಿಚರ್ ಮಾಲ್

New Chitra Theatre in Mangaluru

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸುಮಾರು 91 ವರ್ಷಗಳಿಂದ ಸಿನಿಪ್ರೇಮಿಗಳಿಗೆ ಮನೋರಂಜನೆ ನೀಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೊಟ್ಟಮೊದಲ ಚಿತ್ರಮಂದಿರ ಮತ್ತು ಇಂಗ್ಲಿಷ್ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಏಕೈಕ ಚಿತ್ರಮಂದಿರ ನ್ಯೂ ಚಿತ್ರಾ ಇದೀಗ ಮುಚ್ಚುವ ಸ್ಥಿತಿಗೆ ತಲುಪಿದೆ.

1926ರಲ್ಲಿ ಹಿಂದುಸ್ಥಾನ ಸಿನಿಮಾ ಎಂಬ ಹೆಸರಿನಿಂದ ತೆರೆಯಲ್ಪಟ್ಟ ಈ ಚಿತ್ರಮಂದಿರ 1973ರಲ್ಲಿ ಚಿತ್ರಮಂದಿರ ಪುನರುಜ್ಜೀವನದ ಬಳಿಕ ನ್ಯೂ ಚಿತ್ರ ಎಂದು ಪುನರ್ ನಾಮಕರಣದೊಂದಿಗೆ ಸಿನಿರಸಿಕರಿಗೆ ಮನೋರಂಜನೆ ನೀಡುವ ಕಾಯಕದಲ್ಲಿ ನಿರತವಾಯಿತು. ಆದರೆ ಚಿತ್ರಮಂದಿರವು ಹೊಸ ತಂತ್ರಜ್ಞಾನ ಪರಿಚಯಿಸಲು ಮಾತ್ರವಲ್ಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳೊಂದಿಗೆ ಸ್ಪರ್ಧಿಸಲು ವಿಫಲವಾಯಿತು. ಈ ಚಿತ್ರಮಂದಿರವು 2000ರಲ್ಲಿ ಬಿ ಗ್ರೇಡ್ ಚಿತ್ರಗಳನ್ನು ಕೂಡ ಪ್ರದರ್ಶಿಸಿದೆ.

ಚಿತ್ರಮಂದಿರದ ಕುಸಿತದಿಂದಾಗಿ ಶಂಕರ್ ಪೈ ತನ್ನ ಸಹೋದರನೊಂದಿಗೆ ಕುಟುಂಬ ಉದ್ಯಮದೊಂದಿಗೆ ಸೇರಿಕೊಂಡರು. “ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಟ್ಟಕ್ಕೆ ಉನ್ನತೀಕರಿಸಲು ನಮಗೆ ದೊಡ್ಡ ಮೊತ್ತದ ಹೂಡಿಕೆ ಅಗತ್ಯವಿದೆ. ಇದರೊಂದಿಗೆ ನೋಟು ಅಮಾನ್ಯ ಕೂಡ ನಮಗೆ ದೊಡ್ಡ ಹೊಡೆತವಾಯಿತು. ನಾವು ಚೇತರಿಸಿಕೊಳ್ಳಲಾರದಷ್ಟು ಕುಸಿದು ಹೋದೆವು” ಎಂದು ಪೈ ಹೇಳಿದ್ದಾರೆ.

ಅಳಕೆ ರಸ್ತೆಯಲ್ಲಿ ಅಸ್ಥಿತ್ವದಲ್ಲಿರುವ ಈ ಚಿತ್ರಮಂದಿರ ಕಾರ್ ಸ್ಟ್ರೀಟ್ ಶ್ರೀ ವೆಂಕಟರಮಣ ದೇವಸ್ಥಾನದ ಮಾಲಕತ್ವದ ಜಾಗದಲ್ಲಿದೆ. ಶಂಕರ್ ಮತ್ತು ಸಹೋದರರು ಇದೀಗ ಈ ಚಿತ್ರಮಂದಿರವನ್ನು ಪೀಠೋಪಕರಣಗಳ ಅಂಗಡಿಯಾಗಿ ಮಾರ್ಪಡಿಸಲು ನಿರ್ಧರಿಸಿದ್ದಾರೆ.

ಚಿತ್ರಮಂದಿರವು 1973ರಲ್ಲಿ ಎಂಟರ್ ದಿ ಡ್ರಾಗನ್, 1993ರಲ್ಲಿ ಜುರಾಸಿಕ್ ಪಾರ್ಕ್ ಮತ್ತು 1997ರಲ್ಲಿ ಟೈಟಾನಿಕ್ ಮೊದಲಾದ ಹಿಟ್ ಚಿತ್ರಗಳನ್ನು ಪ್ರದರ್ಶಿಸಿದೆ. ಇಂಗ್ಲಿಷ್ ಚಿತ್ರ ಪ್ರದರ್ಶನ ನಿಲ್ಲಿಸಿರುವುದಕ್ಕೆ ಕಾರಣ ಕೇಳಿದರೆ ಶಂಕರ್ ಅವರು ತಟ್ಟನೆ ನೀಡುವ ಉತ್ತರ ಡಿಜಿಟೈಸೇಷನ್. ಇದು ಚಿತ್ರಮಂದಿರದ ಅದೃಷ್ಟವನ್ನೇ ಬದಲಾಯಿಸಿತು ಎಂದು ಹೇಳಿದ್ದಾರೆ.

ಚಿತ್ರಮಂದಿರದಲ್ಲಿ ಟೈಟಾನಿಕ್ ಚಿತ್ರ 100 ದಿನ ಓಡಿದ್ದರೆ, ದಿ ಸೌಂಡ್ ಆಫ್ ಮ್ಯೂಸಿಕ್ ಚಿತ್ರ 50 ದಿನಗಳು, ಎಂಟರ್ ದಿ ಡ್ರಾಗನ್ 50 ದಿನಗಳು, ಜುರಾಸಿಕ್ ಪಾರ್ಕ್ 50 ದಿನಗಳು ಓಡಿವೆ. ನ್ಯೂಚಿತ್ರಾ ಚಿತ್ರಮಂದಿರದಲ್ಲಿ ಪ್ರದರ್ಶಿಸಿದ ಮೊದಲ ಚಿತ್ರವೆಂದರೆ 1940ರಲ್ಲಿ ಸಂತ್ ನೈನೇಶ್ವರ್ ಮತ್ತು ಕೊನೆಯ ಚಿತ್ರ ಥೋರ್ ಔರ್ ಬೆಟಲ್.