5 ಕೋಟಿ ರೂ ವೆಚ್ಚದಲ್ಲಿ ಪಡೀಲ್ ಬಳಿ ಹೊಸ ಸೇತುವೆ ನಿರ್ಮಾಣ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊನೆಗೂ ಪಡೀಲಿನಲ್ಲಿ ದಿನನಿತ್ಯ ಕಂಗೆಡುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿ ನೂತನ ಮೇಲ್ಸೇತುವೆ ಕಾಮಗಾರಿ ಲೋಕಾರ್ಪಣೆಗೊಂಡಿತು. ಪಡೀಲ್ ಬಳಿ ನೂತನ ಸೇತುವೆಯ ಪಕ್ಕದಲ್ಲೇ ಹಳೆ ಕೆಳಸೇತುವೆಗೆ ಪರ್ಯಾಯವಾಗಿ ಇನ್ನೊಂದು ಹೊಸ ಸೇತುವೆ ನಿರ್ಮಾಣಗೊಳ್ಳಲಿದೆ. ಇದರ ಕಾಮಗಾರಿಯೂ ಮುಂದಿನ ವಾರ ಆರಂಭಗೊಳ್ಳಲಿದೆ.

ರಾಷ್ಟ್ರೀಯ ಹೆದ್ದಾರಿ 73ರ ಪಡೀಲಿನಲ್ಲಿ ಹೊಸ ಸೇತುವೆ ಲೋಕಾರ್ಪಣೆಗೊಂಡ ಬಳಿಕ ಇಲ್ಲಿ ದ್ವಿಮುಖ ಸಂಚಾರ ಪ್ರಾರಂಭಿಸಲಾಗಿದೆ. ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಸ್ತೆ ಮಧ್ಯೆ ಹಲವು ಕೋನ್ ಅಳವಡಿಸಲಾಗಿದೆ. ರಾತ್ರಿ ವೇಳೆ ರಸ್ತೆ ಅಂಚುಗಳನ್ನು ಗುರುತಿಸುವಂತಾಗಲು ರಿಫ್ಲೆಕ್ಟರುಗಳನ್ನೂ ಅಳವಡಿಸಲಾಗಿದೆ. ಈ ನಡುವೆ ಹಳೆ ರಸ್ತೆಯು ಸಂಪೂರ್ಣ ಕೆಟ್ಟು ಹೋಗಿದ್ದು, ಇಲ್ಲಿನ ಧೂಳಿನಿಂದಾಗಿ ವಾಹನ ಸವಾರರಿಗೆ ಸಂಚಾರ ಕಷ್ಟಕರವಾಗಿದೆ. ರಸ್ತೆಗೆ ಹಾಕಲಾಗಿರುವ ಜಲ್ಲಿ ಕಲ್ಲು ಎದ್ದು ಹೋಗಿ ಧೂಳುಮಯವಾಗಿದೆ.

ಹೊಸಸೇತುವೆ ನಿರ್ಮಾಣದ ಬಳಿಕ ಸೇತುವೆಯ ಸಂಪರ್ಕ ರಸ್ತೆಯ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎ ಐ) ಮಾಡಲಿದ್ದು, ಅಲ್ಲಿಯವರೆಗೆ ದ್ವಿಮುಖ ಸಂಚಾರವೇ ಚಾಲ್ತಿಯಲ್ಲಿರುತ್ತದೆ.

ಹೊಸ ಮೇಲ್ಸೇತುವೆ ಬಗ್ಗೆ ಭಾರೀ ಅಪಪ್ರಚಾರ ಕೇಳಿ ಬಂದಿತ್ತು. ಆದರೆ ಇದರಲ್ಲಿ ಎಲ್ಲಾ ಕಂಟೈನರ್, ಘನವಾಹನಗಳೂ ಕೂಡಾ ಸರಾಗವಾಗಿ ಹೋಗುತ್ತಿದೆ. ಅಂದರೆ ಇಂಡಿಯನ್ ರೋಡ್ಸ್ ಕಾಂಗ್ರೆಸ್ (ಐ ಆರ್ ಸಿ) ನಿಯಮದಂತೆ 5.50 ಮೀ ಎತ್ತರದಲ್ಲಿ ಹಾಗೂ 12.50 ಮೀ ಅಗಲದಲ್ಲಿ ನಿರ್ಮಿಸಲಾಗಿದೆ. ರೈಲ್ವೇ ಇಲಾಖೆ ನಿರ್ಮಿಸುವ ಹೊಸ ಕೆಳ ಸೇತುವೆಯೂ ಇಷ್ಟೇ ಎತ್ತರವನ್ನು ಹೊಂದಲಿದೆ. ಆರ್ ಟಿ ಒ ನಿಯಮದಂತೆ ಕಂಟೈನರ್ ಸಹಿತ ಒಂದು ವಾಹನವು ಗರಿಷ್ಠ 4.8 ಮೀ ಎತ್ತರವನ್ನು ಮಾತ್ರ ಹೊಂದಿರಬಹುದು. ಹೆದ್ದಾರಿಯ ಎತ್ತರವೂ ಹಾಲಿ 1.5 ಮೀಟರಿನಿಂದ 1.8 ಮೀ.ಗೆ ಹೆಚ್ಚುವ ಸಾಧ್ಯತೆ ಇದೆ.

ನೂತನವಾಗಿ ನಿರ್ಮಿಸಲಾಗುವ ಸೇತುವೆಗೆ 5 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಕಳೆದ ವಾರದಿಂದ ಸಮತಟ್ಟು ಮಾಡುವ ಕೆಲಸವನ್ನು ರೈಲ್ವೇ ಇಲಾಖೆ ಪ್ರಾರಂಭಿಸಿದೆ. ಮುಂದಿನ ವಾರದಿಂದ ಕಾಮಗಾರಿ ಶುರುವಾಗಿ ಎರಡೂವರೆ ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಮಂಗಳೂರು ಸದರ್ನ್ ರೈಲ್ವೇ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ (ಕನಸ್ಟ್ರಕ್ಷನ್) ಎಂ ಪ್ರವೀಣ್ ತಿಳಿಸಿದ್ದಾರೆ.