ಸಾಮರಸ್ಯ ಮೆರೆದ ನೆಟ್ಟಣಿಗೆ ಕ್ಷೇತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪರಸ್ಪರ ಅರ್ಥೈಸಿಕೊಂಡು ಗೌರವಿಸುವುದನ್ನು ರೂಢಿಗೊಳಿಸುವುದರಿಂದ ಶಾಂತಿ, ನೆಮ್ಮದಿ ನೆಲೆಗೊಳ್ಳುತ್ತದೆ. ಪ್ರಾಚೀನ ಕಾಲದಿಂದಲೂ ತುಳುನಾಡು ಸೌಹಾರ್ದತೆ, ಸಾಮರಸ್ಯಗಳಿಗೆ ಮಾದರಿಯಾಗಿದ್ದು, ಆಧುನಿಕ ಯುವ ತಲೆಮಾರು ವಿದ್ಯಾಭ್ಯಾಸ, ತಂತ್ರಜ್ಞಾನಗಳ ಮರೆಯಲ್ಲಿ ಮಾನವೀಯತೆಯಂತಹ ಜೀವನ ಪಾಠಗಳನ್ನು ಮರೆಯುತ್ತಿರುವುದು ಸಲ್ಲದು. ತುಳುನಾಡಿನ ಆಚರಣೆ, ನಂಬಿಕೆಗಳು ಶಕ್ತಿಯುತವಾಗಿ ಸಮಗ್ರ ಸಮಾಜ ನಿರ್ಮಾಣದ ಗಟ್ಟಿತನವನ್ನು ಬೆಳೆಸಿದೆ ಎಂದು ಸೈಯ್ಯದ್ ಮೊಹಮ್ಮದ್ ಮದನಿ ತಂಙಳ್ ಅಲ್ ಬುಖಾರಿ ಮೊಗ್ರಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ನೆಟ್ಟಣಿಗೆ ಮಹತೋಭಾರ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ನೇತೃತ್ವದಲ್ಲಿ ನಡೆಯಲಿರುವ ವಾರ್ಷಿಕ ಶ್ರೀಭೂತಬಲಿ ಉತ್ಸವ, ಸಮಾರಂಭದ ಅಂಗವಾಗಿ ಬೆಳ್ಳೂರು ಸಮೀಪದ ನೂಂಜ ಮುಹ್ಹಿದ್ದೀನ್ ಜುಮಾ ಮಸೀದಿಗೆ ಇತ್ತೀಚೆಗೆ ನೆಟ್ಟಣಿಗೆ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರ ಸಹಿತ ಪದಾಧಿಕಾರಿಗಳು ಭೇಟಿ ನೀಡಿ ಮಸೀದಿ ಅಧಿಕೃತರಿಗೆ ಸಮಾರಂಭಕ್ಕೆ ಆಹ್ವಾನ ನೀಡಿದಾಗ ಶುಭಹಾರೈಸಿ ಅವರು ಮಾತನಾಡಿದರು.

ಈ ಸಂದರ್ಭ ಮಸೀದಿ ಸಮಿತಿ ಹಾಗೂ ಕ್ಷೇತ್ರ ಸಮಿತಿ ಪದಾಧಿಕಾರಿಗಳು ಪರಸ್ಪರ ಹಸ್ತ ಲಾಘವ ನಡೆಸಿ ಸೌಹಾರ್ದತೆ ಮೆರೆದರು.

ಮಸೀದಿ ಸಮಿತಿಯ ಪದಾಧಿಕಾರಿಗಳು ಎಲ್ಲಾ ಕಾರ್ಯಕ್ರಮಗಳಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿ ಅಗತ್ಯ ನೆರವು ನೀಡುವ ಭರವಸೆ ನೀಡಿ, ಹಾರೈಸಿದರು.