ನೇತ್ರಾವತಿ ಯಾತ್ರೆ ನಾಳೆ ಬಂಟ್ವಾಳ ತಾಲೂಕಿಗೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಎತ್ತಿನ ಹೊಳೆ ಯೋಜನೆ ವಿರೋಧಿಸಿ ಜಿಲ್ಲೆಯ ಜೀವ ನದಿ ಉಳಿಸಿ ಹೋರಾಟದ ಅಂಗವಾಗಿ ಪಂಚತೀರ್ಥ ಸಪ್ತ ಕ್ಷೇತ್ರ ರಥ ಯಾತ್ರೆಯು ಡಿಸೆಂಬರ್ 11 ರಂದು ತಾಲೂಕು ಪ್ರವೇಶಿಸಲಿದೆ ಎಂದು ಯಾತ್ರೆಯ ಸಂಚಾಲಕ ಜಿ ಆನಂದ ತಿಳಿಸಿದರು.

ಗುರುವಾರ ಸಂಜೆ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಪ್ಪಿನಂಗಡಿಯಿಂದ ಹೊರಡುವ ಈ ರಥ ಯಾತ್ರೆಯನ್ನು ಅಪರಾಹ್ನ 2.30ಕ್ಕೆ ಕಲ್ಲಡ್ಕದಲ್ಲಿ ಸ್ವಾಗತಿಸಲಾಗುವುದು. ಬಳಿಕ 3.30ಕ್ಕೆ ಬಿ ಸಿ ರೋಡಿನ ನಾರಾಯಣ ಗುರು ವೃತ್ತಕ್ಕೆ ಆಗಮಿಸುವ ರಥ ಯಾತ್ರೆಯನ್ನು ಬಿ ಸಿ ರೋಡು ಜಂಕ್ಷನ್ನಿಗೆ  ತಲುಪಿಸಿ ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.

ಬಿ ಸಿ ರೋಡಿನಿಂದ ಯಾತ್ರೆಯು ಫರಂಗಿಪೇಟೆ ಬಳಿಕ ಮಂಗಳೂರಿಗೆ ಸಂಚರಿಸಲಿದೆ ಎಂದ ಅವರು,  “ಇದು ಯಾವುದೇ ಪಕ್ಷದ ಪ್ರಾಯೋಜಿತ ಯಾತ್ರೆಯಲ್ಲ. ನೇತ್ರಾವತಿ ಉಳಿವಿಗಾಗಿ ನಡೆಯುವ ಈ ಯಾತ್ರೆಯಲ್ಲಿ ಸರ್ವ ಪಕ್ಷೀಯರು ಹಾಗೂ ಸರ್ವ ಧರ್ಮೀಯರು ಪಾಲ್ಗೊಳ್ಳಲಿದ್ದಾರೆ” ಎಂದರು.

ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಯಾತ್ರೆಯ ಉದ್ಘಾಟನೆಗೆ ಆಹ್ವಾನಿಸಲಾಗಿದ್ದು, ಜಿಲ್ಲೆಯ ಜನರ ನೀರಿನ ಸಮಸ್ಯೆ ಇದಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರಿಗೂ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.

ಹೋರಾಟ ಸಮಿತಿ ಪ್ರಮುಖರಾದ ಪಿ ಎ ರಹೀಂ, ರಾಮದಾಸ ಬಂಟ್ವಾಳ, ಗುರುದತ್ ನಾಯಕ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ಈ ಸಂದರ್ಭ ಉಪಸ್ಥಿತರಿದ್ದರು.