ಜಲಸಾಹಸಿಗರ ನೆಚ್ಚಿನ ತಾಣ ನೇತ್ರಾಣಿ ದ್ವೀಪ

ಅರಬ್ಬೀ ಸಮುದ್ರದಲ್ಲಿ ಮುರುಡೇಶ್ವರದಿಂದ ಸುಮಾರು 10 ನಾಟಿಕಲ್ (ನೌಕಾಅಳತೆ)

ಮೈಲಿಯಷ್ಟು ದೂರವಿರುವ ಪ್ರದೇಶ ನೇತ್ರಾಣಿ ದ್ವೀಪ. `ಪಾರಿವಾಳ ದ್ವೀಪ’ ಎಂದೂ ಕರೆಯಲ್ಪಡುವ ಕರ್ನಾಟಕ ಮತ್ತು ಗೋವಾದ ಗಡಿಭಾಗದಲ್ಲಿ ಕರ್ನಾಟಕ ಕರಾವಳಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ.

ಸುಪ್ರಭಾ

ಭಾರತೀಯ ನೌಕಾದಳ ಸಮರಾಭ್ಯಾಸ ನೆಡೆಸುತ್ತಿದ್ದ ದ್ವೀಪ ಈಗ ಕರ್ನಾಟಕದಲ್ಲೇ ಮೊದಲ ಜಲಕ್ರೀಡಾ ಸಾಹಸ ಸ್ಥಳವಾಗಿದ್ದು ದೇಶ ವಿದೇಶಿಯರನ್ನು ಸೆಳೆಯುತ್ತಿದೆ. ಸಮುದ್ರದಾಳದಲ್ಲಿ ಇಳಿದು ಜೀವಂತ ಮೀನುಗಳನ್ನು ಸ್ಪರ್ಶಿಸಿ ಸಂತೋಷಪಡುವ ಕನಸು ಈಡೇರಿಸಲು ಇನ್ನು ವಿದೇಶಕ್ಕೆ ಹೋಗಬೇಕಾಗಿಲ್ಲ. ನಮ್ಮ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ನಡುಗುಡ್ಡೆ ನೇತ್ರಾಣಿ ಈಗ ಪ್ರವಾಸಿಗರ ಹಾಟ್‍ಸ್ಪಾಟ್ ಆಗಿರುವುದು ಇದೇ ಕಾರಣದಿಂದ. ನೌಕಾದಳದ ಸಮಸರಾಭ್ಯಾಸದಿಂದ ಜೀವವೈವಿಧ್ಯಕ್ಕೆ ಕಂಟಕ ಎದುರಾಗಿದ್ದ ನೇತ್ರಾಣಿಯಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿತ್ತು. ಆದರೆ ಈಗ ಜಿಲ್ಲಾಡಳಿತ ಇಲ್ಲಿ ಜಲಕ್ರೀಡೆಗಳಿಗೆ ಅವಕಾಶ ಕಲ್ಪಿಸಿದೆ.

ಅರಬ್ಬೀ ಸಮುದ್ರದಲ್ಲಿ ಮುರುಡೇಶ್ವರದಿಂದ ಸುಮಾರು 10 ನಾಟಿಕಲ್ (ನೌಕಾಅಳತೆ) ಮೈಲಿಯಷ್ಟು ದೂರವಿರುವ ಪ್ರದೇಶ ನೇತ್ರಾಣಿ ದ್ವೀಪ. `ಪಾರಿವಾಳ ದ್ವೀಪ’ ಎಂದೂ ಕರೆಯಲ್ಪಡುವ ಕರ್ನಾಟಕ ಮತ್ತು ಗೋವಾದ ಗಡಿಭಾಗದಲ್ಲಿ ಕರ್ನಾಟಕ ಕರಾವಳಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದಲ್ಲಿ ಪಾರಿವಾಳಗಳು ಮಾತ್ರವಲ್ಲ, ಕಾಡು ಮೇಕೆಗಳನ್ನೂ ನೋಡಬಹುದು. ಗೋವಾ, ಮುಂಬೈ ಮತ್ತು ಬೆಂಗಳೂರಿನಿಂದ ಸುಲಭವಾಗಿ ಪ್ರವೇಶಿಸಬಹುದಾದ ದ್ವೀಪವಾಗಿರುವ ಕಾರಣದಿಂದಾಗಿ ಇದು ಯುವಜನರ ನಡುವೆ ಬಹಳ ಜನಪ್ರಿಯವಾಗಿದೆ.

ನೇತ್ರಾಣಿಯು ಹವಳದ ದ್ವೀಪವಾಗಿದ್ದು ಊದುಗೊಳವೆ ಹಾಕಿ ಈಜುವ ಮತ್ತು ಧುಮುಕುವ ಅಥವಾ ಸ್ಕೂಬಾಡೈವಿಂಗ್ ಚಟುವಟಿಕೆಗಳಿಗೆ ಪ್ರಶಸ್ತವಾಗಿದೆ. ವಿವಿಧ ರೀತಿಯ ಹವಳಗಳು, ಚಿಟ್ಟೆ ಮೀನು, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು ಮತ್ತು ಸಿಗಡಿ ಮೀನುಗಳು ಇಲ್ಲಿ ಕಂಡುಬರುತ್ತವೆ. ಧುಮುಕುಗಾರರು ಓರ್ಕಾ ಮತ್ತು ತಿಮಿಂಗಿಲಗಳನ್ನೂ ನೋಡಿರುವ ವರದಿ ಇದೆ. ಚೂಪಾದ ಬಂಡೆಗಳು ಮತ್ತು ಕಡಿದಾದ ಕಮರಿಗಳಿರುವುದರಿಂದ ಸಾಮಾನ್ಯವಾಗಿ ಪ್ರವಾಸಿಗರು ದ್ವೀಪವನ್ನು ಹತ್ತದೇ, ಧುಮುಕುವ ಮತ್ತು ಊದುಗೊಳವೆ ಹಾಕಿ ಈಜುವ ಚಟುವಟಿಕೆಗಳನ್ನು ದ್ವೀಪದ ಸಮೀಪದಲ್ಲಿ ನಡೆಸುತ್ತಾರೆ.

ವೃತ್ತಿನಿರತ ಧುಮುಕುಗಾರರಿಗೆ ಈ ಸ್ಥಳವು ಪ್ರಶಸ್ತವಾಗಿದೆ. ನೇತ್ರಾಣಿಯ ಪಕ್ಕದಲ್ಲಿರುವ ದ್ವೀಪವು ಭಾರತೀಯ ನೌಕಾಪಡೆಯಿಂದ ಗುರಿ ಅಭ್ಯಾಸಕ್ಕಾಗಿ ಬಳಸಲ್ಪಡುತ್ತದೆ. ಖಾಲಿ ಗುಂಡುಗಳನ್ನು ನೇತ್ರಾಣಿ ಮತ್ತು ಪಕ್ಕದ ದ್ವೀಪದಲ್ಲಿ ಕಾಣಬಹುದು.

ಜಿಲ್ಲಾಡಳಿತ ರವೀಂದ್ರನಾಥ ಟ್ಯಾಗೋರ್ ಕಡಲ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿಯ ಮೂಲಕ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಪ್ರಕ್ರಿಯೆ ಮಾಡಿಸಲು ಮೂರು ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಿದೆ. ಡೈವ್ ಗೋವಾ, ಮುಂಬೈನ ವೆಸ್ಟ್ ಕೋಸ್ಟ್ ಮತ್ತು ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಗಳು ನುರಿತ ಸ್ಕೂಬ್ ತರಬೇತುದಾರರ ಮೂಲಕ ಜಲಸಾಹಸಿ ಮತ್ತು ಜಲಚರಗಳ ಜೀವ ವೈವಿಧ್ಯದಲ್ಲಿ ಆಸಕ್ತಿ ಇರುವ ಪ್ರವಾಸಿಗರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.

ನೇತ್ರಾಣಿ ಜಗತ್ತಿನ ಕೆಲವೇ ಅಪರೂಪದ ದ್ವೀಪಗಳಲ್ಲಿ ಒಂದು. ಅಂಡಮಾನ್ ನಿಕೋಬಾರ್, ಲಕ್ಷದ್ವೀಪ ಮತ್ತು ಪುದುಚೆರಿ ಹಾಗೂ ಗೋವಾ ಬಿಟ್ಟರೆ ಸ್ಕೂಬಾ ಡೈವಿಂಗ್‍ಗೆ ಹೇಳಿ ಮಾಡಿಸಿದ ತಾಣ ಇರುವುದು ನೇತ್ರಾಣಿಯಲ್ಲಿ ಮಾತ್ರ. ನೇತ್ರಾಣಿ ದ್ವೀಪದ ಸುತ್ತಲಿನ ಕಡು ನೀಲಿ ಬಣ್ಣದ ಸಮುದ್ರದಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆಯಲ್ಲಿ 9 ಮೀಟರಿನಿಂದ 12 ಮೀಟರ್ ತನಕ ಸಮುದ್ರದ ತಳಭಾಗ ಸಹ ದೋಣಿಯಲ್ಲಿ ಕುಳಿತು ಇಣುಕಿದರೂ ಕಾಣುತ್ತದೆ. ಇಂಥ ಅಪರೂಪದ ತಾಣ ಜಗತ್ತಿನಲ್ಲಿ ಕಡಿಮೆ. ಆಕ್ಸಿಜನ್ ಸಿಲಿಂಡರ್ ಸಹಾಯ ಪಡೆದು ಸಮುದ್ರದೊಳಗಣ ಜಗತ್ತಿಗೆ ಪಯಣಿಸಿದರೆ ಲೆಕ್ಕವಿಲ್ಲದಷ್ಟು ಜೀವ ಜಗತ್ತು, ವಿವಿಧ ಜಾತಿಯ ಬಣ್ಣ ಬಣ್ಣದ ಮೀನುಗಳು ಚಲಿಸುತ್ತ ಸುಂದರ ಜಗತ್ತಾಗಿ ಕಾಣಸಿಗುತ್ತದೆ.

ನೇತ್ರಾಣಿ ದ್ವೀಪ ಕಾರವಾರದಿಂದ 130 ಕಿ ಮೀ ದೂರದಲ್ಲಿದೆ. ಭಟ್ಕಳ ತಾಲೂಕಿನ ಮುರುಡೇಶ್ವರದ ಸಮೀಪವಿದೆ. ಮುರುಡೇಶ್ವರದಿಂದ ಸಮುದ್ರದಲ್ಲಿ 1 ಗಂಟೆ 30 ನಿಮಿಷ 17 ಕಿ ಮೀ ಪಯಣಿಸಿದರೆ ನೇತ್ರಾಣಿಯ ದರ್ಶನವಾಗುತ್ತದೆ. ನೀಲೆ ಬಟ್ಟಲಿನಲ್ಲಿ ಹಸಿರು ತಟ್ಟೆಯನ್ನು ತೇಲಿ ಬಿಟ್ಟಂತೆ ಕಾಣುವ ನೇತ್ರಾಣಿ ದ್ವೀಪ ಸಹಜ ಸುಂದರಿ. ಅದರ ಸುತ್ತಲ ಜೀವಜಲದ ಜಗತ್ತು ಇನ್ನು ರುದ್ರ ರಮಣೀಯ.

ಸ್ಕೂಬಾ ಡೈವಿಂಗಿನಿಂದಾಗಿ ಇಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸ್ಕೂಬಾ ಡೈವಿಂಗ್ ಅಪರೂಪದ ಜಲಸಾಹಸ ಕ್ರೀಡೆ. ತಿಂಗಳಿಗೆ ಸರಾಸರಿ 100 ಪ್ರವಾಸಿಗರು ಸ್ಕೂಬಾ ಡೈವಿಂಗ್ ಮಾಡಲು ದೇಶ ವಿದೇಶಗಳಿಂದ ಇಲ್ಲಿಗೆ ಬರುತ್ತಾರೆ. ಹಾಗಾಗಿ ಮುರುಡೇಶ್ವರ ಸೇರಿದಂತೆ ಜಿಲ್ಲೆಯ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಬಂದಿದೆ. 2016 ಅಕ್ಟೋಬರಿನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದರೂ ಸ್ಥಳೀಯ ಕೆಲ ಮೀನುಗಾರರ ವಿರೋಧದಿಂದ ಸ್ಕೂಬಾ ಡೈವಿಂಗ್ ನಡೆಸಲು ಸಾಧ್ಯವಾಗಿರಲಿಲ್ಲ. 2017 ಜನವರಿಯಲ್ಲಿ ಸ್ಕೂಬಾ ಡೈವಿಂಗಿಗೆ ತೆರಳುತ್ತಿದ್ದ ಪ್ರವಾಸಿಗರ ಮೇಲೆ ಹಲ್ಲೆಯೂ ನಡೆಯಿತು. ಮೀನುಗಾರರಲ್ಲಿ ಇರುವ ಅನುಮಾನ ಹೋಗಲಾಡಿಸಿದ ನಂತರ ಯಾವುದೇ ಸಮಸ್ಯೆ ಎದುರಾಗಿಲ್ಲ. 2017 ಫೆಬ್ರವರಿಯಿಂದ ನಿರಂತರವಾಗಿ ಸ್ಕೂಬಾ ಡೈವಿಂಗ್ ನಡೆಯುವಂತೆ ಜಿಲ್ಲಾಡಳಿತ ನೋಡಿಕೊಂಡಿದೆ. ಸ್ಥಳೀಯರಿಗೂ ಉದ್ಯೋಗಾವಕಾಶಗಳು ಲಭ್ಯವಾಗಿವೆ. ಜಿಲ್ಲಾಡಳಿತದ ಕಡಲತೀರ ಅಭಿವೃದ್ಧಿ ಸಮಿತಿಗೆ ವಾರ್ಷಿಕವಾಗಿ ಮೂರು ಸ್ಕೂಬಾ ಡೈವಿಂಗ್ ಕಂಪನಿಗಳಿಂದ 16 ಲಕ್ಷ ರೂ ಆದಾಯ ಬರುತ್ತದೆ ಎನ್ನಲಾಗಿದೆ.

ಇತ್ತೀಚೆಗೆ ನೇತ್ರಾಣಿ ದ್ವೀಪದಲ್ಲಿ `ಸ್ಕೂಬಾ ಡೈವಿಂಗ್ ಉತ್ಸವ’ ಏರ್ಪಡಿಸಲಾಗಿತ್ತು. ಆ ಮೂಲಕ ಜಗತ್ತಿನ ಪ್ರವಾಸಿಗರನ್ನು ನೇತ್ರಾಣಿ ಐಲ್ಯಾಂಡಿನತ್ತ ಸೆಳೆಯುವ ಪ್ರಯತ್ನ ಇದು. ಇಲ್ಲಿ ಸ್ಕೂಬಾ ಡೈವಿಂಗ್ ಅನಧಿಕೃತವಾಗಿ 10 ವರ್ಷದ ಹಿಂದೆಯೇ ಪ್ರಾರಂಭವಾಗಿತ್ತು. ಮುಂಬಯಿ ಮೂಲದವರು ಗೋವಾ ಪ್ರವಾಸಿಗರನ್ನು ವರ್ಷದಲ್ಲಿ ನಾಲ್ಕಾರು ಬಾರಿ ಸ್ಕೂಬಾ ಡೈವಿಂಗ್ ಮಾಡಲು ಮತ್ತು ತರಬೇತಿ ನೀಡಲು ಕರೆತರುತ್ತಿದ್ದರು. ಆದರೆ ನಾಲ್ಕು ವರ್ಷಗಳಿಂದ ಪೂರ್ಣವಾಗಿ ಸ್ಥಗಿತವಾಗಿತ್ತು. ಅಂಡಮಾನ್ ನಿಕೋಬಾರ್, ಲಕ್ಷ ದ್ವೀಪದಲ್ಲಿ ನಿರಂತರವಾಗಿ ಸ್ಕೂಬಾ ಡೈವಿಂಗ್ ನಡೆಯುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಆಸಕ್ತಿ ವಹಿಸಿ ಟೆಂಡರ್ ಕರೆದು ನುರಿತ ಸ್ಕೂಬಾ ಡೈವಿಂಗ್ ನಡೆಸುವ ಕಂಪನಿಗಳ ಮೂಲಕ ರಾಯಲ್ಟಿ ಕಟ್ಟಿಸಿಕೊಳ್ಳುವ ಕರಾರು ಮಾಡಿಕೊಂಡು ಜಲಸಾಹಸ ನಿರಂತರವಾಗಿ ನಡೆಯುವಂತೆ ನೋಡಿಕೊಂಡರು.

ನೇತ್ರಾಣಿಗೆ ತೆರಳಲು ತಹಶೀಲ್ದಾರರ ಅನುಮತಿ ಬೇಕಾಗುತ್ತದೆ. ಅನುಮತಿಯಿಲ್ಲದೆ ನೇತ್ರಾಣಿಗೆ ಭೇಟಿ ಕೊಡುವುದು ಸಮಂಜಸವಲ್ಲ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಡಿಸೆಂಬರ್ ಮತ್ತು ಜನವರಿ. ಸಮುದ್ರವು ಪ್ರಕ್ಷುಬ್ಧವಾಗುವುದರಿಂದ ಇಲ್ಲಿನ ವಿಹಾರಧಾಮವು ಜೂನ್-ಸಪ್ಟೆಂಬರ್ ತಿಂಗಳುಗಳಲ್ಲಿ ಊದುಗೊಳವೆ ಹಾಕಿ ಈಜುವ ಮತ್ತು ಧುಮುಕುವ ಚಟುವಟಿಕೆಗಳಿಗೆ ಪ್ರವಾಸಿಗರನ್ನು ಕರೆಸಿಕೊಳ್ಳುವುದಿಲ್ಲ.

LEAVE A REPLY