ನಗರದಲ್ಲಿ ರಾತ್ರಿ ಮನೆಯಿಲ್ಲದ ನಿರ್ಗತಿಕರು ಮತ್ತೆ ರಸ್ತೆ ಬದಿಗೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿರುವ ಎರಡು ತಾತ್ಕಾಲಿಕ ರಾತ್ರಿ ಆಶ್ರಯ ಮನೆಗಳು ಮನಪಾದ  ನಿರ್ಲಕ್ಷಕ್ಕೊಳಗಾಗಿದ್ದು, ಮನೆಯಿಲ್ಲದ ನಗರವಾಸಿಗಳು ರಾತ್ರಿ ಕಳೆಯಲು ಮತ್ತೆ ರಸ್ತೆ ಬದಿಗೆ ತಳ್ಳಲ್ಪಟ್ಟಿದ್ದಾರೆ.

ನಿವಾಸಗಳಿಲ್ಲದ ನಗರದ ಜನರಿಗೆ ರಾತ್ರಿ ಆಶ್ರಯ ತಾಣಗಳನ್ನು ಪ್ರಾರಂಭಿಸಬೇಕು ಎಂದು ಸುಪ್ರೀಂ ಕೋರ್ಟು ಹೊರಡಿಸಿದ ನಿರ್ದೇಶನದಂತೆ ನಗರದಲ್ಲಿ ಎರಡು ತಾತ್ಕಾಲಿಕ ಆಶ್ರಯ ತಾಣಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರ ಮೂಲಭೂತ ಸೌಕರ್ಯ ಮತ್ತು ನಿರ್ವಹಣೆಗಾಗಿ ನಿಧಿ ಒದಗಿಸುತ್ತಿದೆ. ಈ ಕೇಂದ್ರಗಳನ್ನು ನಗರ ಸ್ಥಳೀಯ ಪ್ರತಿನಿಧಿಗಳು ನೋಡಿಕೊಳ್ಳಬೇಕು. ಈ ಪ್ರತಿನಿಧಿಗಳು ರಸ್ತೆ ಬದಿಯಲ್ಲಿ ಮಲಗುವ ನಿರಾಶ್ರಿತರನ್ನು ಆಶ್ರಯತಾಣಗಳಲ್ಲಿ ವಿಶ್ರಾಂತಿ ಪಡೆಯುವಂತೆ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ತಂಡವೊಂದನ್ನು ರಚಿಸಿ  ರಾತ್ರಿ ಗಸ್ತು ತಿರುಗಿಸಿ ರಸ್ತೆ ಬದಿಯಲ್ಲಿ ಮಲಗಿರುವವರನ್ನು ಈ ಆಶ್ರಯ ತಾಣಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.

ಪ್ರಸಕ್ತ ಈ ಆಶ್ರಯತಾಣಗಳನ್ನು ಮನಪಾ ನೋಡಿಕೊಳ್ಳುತ್ತಿದ್ದು, ಫಲಾನುಭವಿಗಳನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.

ಈ ಆಶ್ರಯತಾಣಗಳ ಜವಾಬ್ದಾರಿ ಯನ್ನು ಏಜೆನ್ಸಿಗಳಿಗೆ ವಹಿಸಲು ಅಥವಾ ಆ ನಿಟ್ಟಿನಲ್ಲಿ ಟೆಂಡರು ಆಹ್ವಾನಿಸಲು ಮನಪಾ ವಿಫಲವಾಗಿದೆ. ಸದ್ಯ ಈ ಆಶ್ರಯತಾಣ ನಿರಾಶ್ರಿತರನ್ನು ಹೊಂದಿಲ್ಲ. ಬದಲಾಗಿ ಇದನ್ನು ಯಾವುದೋ ವ್ಯಕ್ತಿಗಳು ಬಾಡಿಗೆ ಹಾಸ್ಟೆಲ್ ರೀತಿ ಬಳಕೆ ಮಾಡುತ್ತಿದ್ದಾರೆ. ಇತ್ತ ನಿಜವಾದ ಫಲಾನುಭವಿಗಳು ಫುಟ್ಪಾತುಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ.

ಗುಜರಿ ಹೆಕ್ಕುವ ತಂಗವೇಲು ಪ್ರತಿದಿನ ರಾತ್ರಿ ಹಂಪನಕಟ್ಟೆಯ ಹೂ ಮಾರುಕಟ್ಟೆಯಲ್ಲಿ ಒಂದು ಮೂಲೆಯಲ್ಲಿ ಮಲಗುತ್ತಿದ್ದ. ಒಂದು ದಿನ ಆತನನ್ನು ಮನಪಾ ನಡೆಸುತ್ತಿರುವ ಆಶ್ರಯ ತಾಣಕ್ಕೆ ಕರೆದೊಯ್ಯಲಾಯಿತು. ಆತ ಕುಡುಕನಲ್ಲ. ಆದರೆ ಆಶ್ರಯ ತಾಣದಲ್ಲಿ ತಂಗುತ್ತಿದ್ದ ಕುಡುಕರು ಆತ ಸ್ಥಳೀಯ ಭಾಷೆ ಮಾತನಾಡುತ್ತಿಲ್ಲ ಎಂಬ ಕಾರಣಕ್ಕೆ ಹೊರದಬ್ಬಿದ್ದಾರೆ. ತಂಗವೇಲು ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದಾನೆ. ಅನಕ್ಷರತೆ ಮತ್ತು ಬಡತನ ಆತನನ್ನು ಗುಜರಿ ಹೆಕ್ಕುವ ಕೆಲಸಕ್ಕೆ ತಳ್ಳಿತು. ನಗರದಲ್ಲಿ ರಾತ್ರಿ ಆಶ್ರಯ ಮನೆಯಿದ್ದರೂ ಆಶ್ರಯ ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳುತ್ತಾನೆ ತಂಗವೇಲು.

ಕಾರ್‍ಸ್ಟ್ರೀಟಿನ ರಾತ್ರಿ ಆಶ್ರಯ ಮನೆಯಲ್ಲಿ ಶಾಶ್ವತವಾಗಿ ನೆಲೆಯಾಗಿರುವ ಸಿದ್ದಯ್ಯ, “ರಾತ್ರಿ ಆಶ್ರಯ ತಾಣ ತುಂಬಿ ಹೋಗಿದೆ, ಹೊಸ ಜನರಿಗೆ ಜಾಗವೇ ಇಲ್ಲ, ಮನಪಾ ಅನುಮತಿಯಿಲ್ಲದೆ ಆಶ್ರಯ ಮನೆಗೆ ಬರುವ ಜನರನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ” ಎಂದು ಹೇಳಿದ್ದಾನೆ.

“ಬಂದರಿನಲ್ಲಿ ನಿರ್ಮಾಣ ಗೊಳ್ಳುತ್ತಿರುವ ರಾತ್ರಿ ಆಶ್ರಯ ತಾಣ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಹಾಸ್ಟೆಲ್ ರೀತಿಯ ವಾತಾವರಣವನ್ನು ಹೊಂದಿದ್ದು, ಕಟ್ಟುನಿಟ್ಟಿನ ನಿಯಮ ಗಳೊಂದಿಗೆ ನಡೆಯಲಿದೆ. ಕೋರ್ಟು ನಿರ್ದೇಶನದಂತೆ ಸೇವೆ ನೀಡಲಾಗುವುದು. ಸಂಬಂಧಪಟ್ಟ ಇಲಾಖೆಯು ರಾತ್ರಿ ಆಶ್ರಯ ಮನೆಯನ್ನು ಯಶಸ್ವಿಯಾಗಿ ನಡೆಸುವ ಕುರಿತು ಮಾರ್ಗೋಪಾಯಗಳನ್ನು ಕೈಗೊಳ್ಳಲಿದೆ. ಸುಮಾರು 75 ಮಂದಿ ನಿರಾಶ್ರಿತರಿಗೆ ಆಶ್ರಯ ನೀಡುವ ಸೌಲಭ್ಯ ಹೊಂದಿದೆ” ಎಂದು ಮೇಯರ್ ಹರಿನಾಥ ಕೆ ಹೇಳಿದ್ದಾರೆ.