ಇದು ನೀಟ್ ಪರೀಕ್ಷೆಯೋ ಅಥವಾ ಉಡುಪು ತೊಡುಪುಗಳ ಪರೀಕ್ಷೆಯೋ

ತಪಾಸಣೆ ಹೆಸರಿನಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಸರಿಯೇ ?

ಮೊನ್ನೆ ತಾನೇ ದೇಶಾದ್ಯಂತ ನಡೆದ ನೀಟ್  ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸುಗಳ ರಾಷ್ಟ್ರೀಯ ಅರ್ಹತೆ  ಪರೀಕ್ಷೆ ಮುಗಿದರೂ ಪರೀಕ್ಷೆ ಮುನ್ನ ನಡೆದ ಗೋಜಲುಗಳಿಂದ ಹಲವು ವಿದ್ಯಾರ್ಥಿನಿಯರು ನೀಟ್ ಕೊಟ್ಟ ಶಾಕಿನಿಂದ ಹೊರಬಂದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಮಾನ ನಿಲ್ದಾಣದಲ್ಲಿ ಸಹ ನಡೆಯದ ತಪಾಸಣೆ ಇಲ್ಲಿ ನಡೆದಿದೆ ಎಂದರೆ ಇದಕ್ಕೇನೆನ್ನಬೇಕು  ಪರೀಕ್ಷೆ ಬರೆಯಲು ಬರುವವರು ಎಸಗುವ ಪರೀಕ್ಷಾ ಅಕ್ರಮ ತಡೆಯಲು ಡ್ರೆಸ್ ಕೋಡ್ ಹಾಗೂ ತಪಾಸಣೆ ನಡೆಸಲಾದರೂ ಅದೆಲ್ಲಾ ಅಮಾನವೀಯತೆಯಿಂದ ಕೂಡಿತ್ತು ಎಂಬುದಾಗಿ ವಿದ್ಯಾರ್ಥಿನಿಯರ ಹಾಗೂ ಪೋಷಕರ ಅಳಲು
ತುಂಬು ತೋಳಿನ ಶರ್ಟ್ ಹಾಕಬಾರದು, ಓಲೆ, ಮೂಗುತಿ, ಹೇರ್ ಪಿನ್, ಸ್ಟಿಕ್ಕರ್, ಕೈ ಬಳೆ, ಸ್ಕಾರ್ಪ್, ಶೂ ಇತ್ಯಾದಿ ಹಾಕುವಂತಿಲ್ಲ ಎಂಬ ಕಟ್ಟಪ್ಪಣೆ ಇತ್ತು. ಹಾಗಾಗಿ ಶರ್ಟಿಗೆ ಉದ್ದ ತೋಳು ಇದ್ದವರು ಅವುಗಳನ್ನು ಕತ್ತರಿಸಿದರು. ಜೀನ್ಸ್ ಪ್ಯಾಂಟ್ ಬದಲಿಸುವುದು, ಕಿವಿಯೋಲೆ, ಉಂಗುರ ತೆಗೆಸುವುದು, ಹೆಚ್ಚ್ಯಾಕೆ ಕೆಲವರ ಒಳಉಡುಪನ್ನು ಸಹ ತೆಗೆಸಲಾಗಿದೆ ಎಂದರೇನರ್ಥ  ಇದೆಲ್ಲ ಅತಿರೇಕದ ವರ್ತನೆಯಲ್ಲದೆ ಮತ್ತೇನು ಒಳಉಡುಪು ತೆಗೆಯಲು ವಠಾರದಲ್ಲಿ ಒಂದೆರಡು ತಾತ್ಕಾಲಿಕ ಶೌಚಾಲಯ ನಿರ್ಮಿಸಬೇಡವೇ  ಬರೆ ಡ್ರೆಸ್ ಕೋಡ್ ಇನ್ನಿತರ ಸಂಗತಿಗಳ ಬಗ್ಗೆ ಕಟ್ಟಪ್ಪಣೆ ಮಾಡಿದರೇನು ಬಂತು. ಹೆಣ್ಮಕ್ಕಳನ್ನು ಅಷ್ಟೊಂದು ನೀಚ ರೀತಿಯಲ್ಲಿ ತಪಾಸಣೆ ಮಾಡುವುದೇ  ನಿಜಕ್ಕೂ ಈ ಬಾರಿ ವಿದ್ಯಾರ್ಥಿನಿಯರು ತುಂಬಾ ಕಿರುಕುಳ ಅನುಭವಿಸಿದ್ದಾರೆ. ಪರೀಕ್ಷೆಗೆ ನಿಯಮಗಳು ಬೇಕು. ಅದರಲ್ಲೂ ಮಾನವೀಯತೆ ಇರಲಿ. ತಪಾಸಣೆ ನೆಪದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುವುದು ಸರಿಯೋ  ವಿದ್ಯಾರ್ಥಿಗಳು ಅನುಭವಿಸಿದ ಈ ಎಲ್ಲಾ ಕಹಿ ಘಟನೆಗಳು ಮುಂದಿನ ವರ್ಷ ಮರುಕಳಿಸದಿರಲಿ

  • ಜೆ ಎಫ್ ಡಿ’ಸೋಜ  ಅತ್ತಾವರ