ಆಧಾರ್ ಗೌಪ್ಯತೆ : ನಿಲೇಕಣಿ ಕಳವಳ

ಮಾಜಿ ಆಧಾರ್ ಅಧ್ಯಕ್ಷ ನಂದನ್ ನಿಲೇಕಣಿ ಅವರೇ ಆಧಾರ್ ಭದ್ರತೆಯೇ ದೊಡ್ಡ ಕಳವಳದ ವಿಷಯ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಆಧಾರ್ ಸಂಸ್ಥೆ ಈ ನಿಟ್ಟಿನಲ್ಲಿ ಸಂಪೂರ್ಣ ಪ್ರಯತ್ನ ಮಾಡುತ್ತಿದೆ ಎಂದೂ ಹೇಳಿದ್ದಾರೆ.

“ಆಧಾರ್ ವ್ಯವಸ್ಥೆಯನ್ನು ಹ್ಯಾಕ್ ಮಾಡುವ ಪ್ರಯತ್ನವಾಗಿಲ್ಲ. ದುರುಳರು ಒನ್ ಟೈಮ್ ಪಾಸ್ವರ್ಡುಗಳನ್ನು (ಒಟಿಪಿ) ಪಡೆಯಲು ಪ್ರಯತ್ನಿಸಿದ್ದಾರೆ ಮತ್ತು ಆ ಮೂಲಕ ಇತರ ವಿವರಗಳನ್ನು ಪಡೆದು ಬಳಸಿದ್ದಾರೆ. ಇದನ್ನು ಹ್ಯಾಕ್ ಎನ್ನಲು ಸಾಧ್ಯವಿಲ್ಲ, ಆದರೆ ಭದ್ರತೆಯೇ ದೊಡ್ಡ ಕಳವಳದ ವಿಷಯ ಎನ್ನುವುದು ನಿಜ” ಎಂದು ನಿಲೇಕಣಿ ಸಿಐಐ (ಭಾರತೀಯ ಉದ್ಯಮ ಸಂಘಟನೆ) ಆಯೋಜಿಸಿದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ತಂತ್ರಜ್ಞ ವೃತ್ತಿಪರ ಅಭಿನವ್ ಶ್ರೀವಾಸ್ತವ ಇತ್ತೀಚೆಗೆ ಸಾರ್ವಜನಿಕ ಅಪ್ಲಿಕೇಶನ್ (ಆ್ಯಪ್) ಒಂದು ಸೃಷ್ಟಿಸಿ ಆಧಾರ್ ವಿವರಗಳನ್ನು ಪಡೆಯುವ ಅವಕಾಶ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಸರ್ಕಾರದ ನ್ಯಾಷನಲ್ ಇನ್ಫಾರ್ಮಟಿಕ್ಸ್ ಸೆಂಟರಿನ ಇ-ಹಾಸ್ಪಿಟಲ್ ಸರ್ವರಿಗೆ ಹ್ಯಾಕ್ ಮಾಡಿ ಶ್ರೀವಾಸ್ತವ ತಮ್ಮ ಅಪ್ಲಿಕೇಶನ್ ನಿರ್ಮಿಸಿದ್ದರು.

ಎಪ್ರಿಲಿನಲ್ಲಿ ಸಂದರ್ಶನವೊಂದರಲ್ಲಿ ನಿಲೇಕಣಿಯವರು ಆಧಾರ್ ಭಾರತದ ಅತೀ ಸುರಕ್ಷಿತ ವ್ಯವಸ್ಥೆ ಮತ್ತು ಜಗತ್ತಿನಲ್ಲೇ ಅತೀ ಸುಭದ್ರ ಎಂದು ಹೇಳಿದ್ದರು. ವ್ಯವಸ್ಥೆಯು ಅತೀ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿರುವ ಕಾರಣ, ಆಧಾರ್ ವಿವರಗಳನ್ನು ಸಂಗ್ರಹಿಸುವ ಸಂಸ್ಥೆಗಳಿಗೆ ವಿವರಗಳನ್ನು ಬಳಸಿಕೊಳ್ಳುವ ಅವಕಾಶವಿರುವುದಿಲ್ಲ ಎಂದು ಹೇಳಿದ್ದರು.  ಈವರೆಗೆ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಹ್ಯಾಕ್ ಮಾಡಿರುವ ಬಗ್ಗೆ ಯಾವುದೇ ಉದಾಹರಣೆಗಳಿಲ್ಲ. ಆದರೆ ಬಳಕೆದಾರ ಸಂಸ್ಥೆಗಳ ಬಳಿ ಇರುವ ವಿಳಾಸ-ಗುರುತು ಸಾಕ್ಷ್ಯಗಳ ದಾಖಲೆಗಳು ಸಂಸ್ಥೆಯ ಕಳವಳಕ್ಕೆ ಕಾರಣವಾಗಿರುವ ವಿವರಗಳಾಗಿವೆ.