ಮಾಡಿದ ಆ ತಪ್ಪು ಹೇಳಿಕೊಳ್ಳಬೇಕಾ?

 

ಅವಳಲ್ಲಿ ಮೆಚುರಿಟಿ ಇದ್ದರೆ `ಏನೋ ಹುಡುಗಾಟದಲ್ಲಿ ನಡೆದ ಘಟನೆ, ಸತ್ಯ ಹೇಳುವಷ್ಟರಮಟ್ಟಿಗಾದರೂ ಪ್ರಾಮಾಣಿಕರು’ ಅಂತ ನಿಮ್ಮನ್ನು ಕ್ಷಮಿಸಲೂ ಬಹುದು.

ಪ್ರ : ನಾನು ಈ ಊರಿಗೆ ಟ್ರಾನ್ಸ್‍ಫರ್ ಆಗಿ ಬರುವ ಮುನ್ನ ಮೊದಲು ಕೆಲಸ ಮಾಡುತ್ತಿದ್ದ ಊರಿನ ಒಂದು ಅಪಾರ್ಟ್‍ಮೆಂಟಿನಲ್ಲಿ ಬಾಡಿಗೆ ಮನೆಯಲ್ಲಿದ್ದೆ. ನಮ್ಮ ಪಕ್ಕದ ಫ್ಲಾಟಿನಲ್ಲಿ ಒಂದು ಚಿಕ್ಕ ಕುಟುಂಬವೂ ವಾಸವಾಗಿತ್ತು. ಅಲ್ಲಿರುವ ಆ ಹುಡುಗಿ ಆಫೀಸಿಗೆ ಹೋಗುವ ಸಮಯಕ್ಕೂ ನಾನು ಹೊರಬೀಳುವ ಸಮಯವೂ ಒಂದೇ ಆಗಿದ್ದರಿಂದ ನಮ್ಮ ನಡುವೆ ಸ್ನೇಹವೂ ಬೆಳೆದಿತ್ತು. ಆ ದಿನ ಅವಳ ಮನೆಯವರು ಬೇರೆ ಊರಿಗೆ ಫಂಕ್ಷನ್ನಿಗೆ ಹೋಗಿದ್ದರು. ಅವಳ ಮನೆಯಲ್ಲಿ ಶಾರ್ಟ್ ಸರ್ಕೀಟಾಗಿ ಕರೆಂಟ್ ಇದ್ದಿರಲಿಲ್ಲ. ಅವಳು ನನ್ನ ರೂಮಿಗೇ ಬಂದು ಆ ದಿನ ಉಳಿದಳು. ಯೌವನದ ಹುಮ್ಮಸ್ಸಿನಲ್ಲಿ ಅಂದು ಇಬ್ಬರೂ ಕಂಟ್ರೋಲ್ ಕಳೆದುಕೊಂಡೆವು. ಮಾಡಬಾರದ ತಪ್ಪು ಮಾಡಿಬಿಟ್ಟೆವು. ಅದೇ ಮೊದಲು ಮತ್ತು ಕೊನೆ. ಮತ್ತೆಂದೂ ನಾವು ಆ ದುಸ್ಸಾಹಸಕ್ಕೆ ಕೈಹಾಕಿಲ್ಲ. ಅದಾದ ಸ್ವಲ್ಪ ಸಮಯದಲ್ಲೇ ಇಲ್ಲಿಗೆ ವರ್ಗವಾಯಿತು. ನಂತರ ಅವಳನ್ನು ಸಂಪರ್ಕಿಸಿಯೇ ಇಲ್ಲ. ಈಗ ನನಗೊಬ್ಬಳು ಗರ್ಲ್‍ಫ್ರೆಂಡ್ ಆಗಿದ್ದಾಳೆ. ಮನೆಯವರೂ ನಮ್ಮ ರಿಲೇಶನ್ನಿಗೆ ಓಕೆ ಹೇಳಿದ್ದಾರೆ. ಡಿಸೆಂಬರಿನಲ್ಲಿ ಮದುವೆಯೂ ಗೊತ್ತಾಗಿದೆ. ಆದರೆ ನಾನು ಆ ದಿನ ಮಾಡಿದ ತಪ್ಪು ಆಗಾಗ ನನ್ನನ್ನು ಚುಚ್ಚುತ್ತಿದೆ. ನನ್ನ ಹುಡುಗಿಗೆ ಎಲ್ಲವನ್ನೂ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಬೇಕು ಅಂತ ಒಮ್ಮೊಮ್ಮೆ ಯೋಚಿಸುತ್ತೇನೆ. ಹೇಳಿಕೊಂಡರೆ ಅವಳೆಲ್ಲಿ ದೂರವಾಗುತ್ತಾಳೋ ಎನ್ನುವ ಆತಂಕವೂ ಇದೆ. ನಾನು ಹೇಳಬೇಕಾ ಅಥವಾ ಆ ವಿಷಯವನ್ನು ಅವಳಿಂದ ಮುಚ್ಚಿಡುವುದೇ ಒಳ್ಳೆಯದಾ?

: ಸಂಗಾತಿಗಳ ಮಧ್ಯೆ ಯಾವ ಗುಟ್ಟೂ ಇರಬಾರದು ಎನ್ನುವುದು ನಿಜವಾದರೂ ಕಳೆದ ಜೀವನದಲ್ಲಿ ನಡೆದ ತಪ್ಪನ್ನು ಹೇಳಿ ಈಗಿನ ಸಂಬಂಧದಲ್ಲಿ ಬಿರುಕು ಮೂಡುವಂತೆ ಮಾಡಿಕೊಳ್ಳುವುದೂ ಜಾಣತನದ ನಡೆಯಲ್ಲ. ನೀವೊಂದು ದಿನ ಹೀಗೆ ಮದುವೆಯಾಗುತ್ತೀರಿ, ಮುಂದೆ ನಿಮಗೇ ಅಪರಾಧೀ ಪ್ರಜ್ಞೆ ಕಾಡಬಹುದು ಎನ್ನುವ ಯೋಚನೆಯೂ ಇಲ್ಲದೇ ಆಗ ಎಡವಿದಿರಿ. ಈಗ ನಿಮ್ಮವಳಾಗುವ ಹುಡುಗಿಯಲ್ಲಿ ಹೇಳಲೂ ಆಗದೇ, ಮುಚ್ಚಿಡಲೂ ಕಷ್ಟವಾಗಿ ಗೊಂದಲ ಅನುಭವಿಸುತ್ತಿದ್ದೀರಿ. ಅವಸರದಲ್ಲಿ ತಪ್ಪೆಸಗಿ ನಿಧಾನವಾಗಿ ಪಶ್ಚಾತ್ತಾಪ ಪಡುತ್ತಿದ್ದೀರಿ. ಈಗ ನೀವು ಒಂದುವೇಳೆ ಸತ್ಯ ಹೇಳಿದರೆ ನಿಮ್ಮ ಹುಡುಗಿ ಅದನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾಳೆ ಅನ್ನುವುದು ಮುಖ್ಯ. ಅವಳಲ್ಲಿ ಮೆಚುರಿಟಿ ಇದ್ದರೆ `ಏನೋ ಹುಡುಗಾಟದಲ್ಲಿ ನಡೆದ ಘಟನೆ, ಸತ್ಯ ಹೇಳುವಷ್ಟರಮಟ್ಟಿಗಾದರೂ ಪ್ರಾಮಾಣಿಕರು’ ಅಂತ ನಿಮ್ಮನ್ನು ಕ್ಷಮಿಸಲೂ ಬಹುದು. ಅದನ್ನೇ ದೊಡ್ಡದು ಮಾಡಿ ಸಂಬಂಧ ಕಡಿದುಕೊಳ್ಳಲೂಬಹುದು. ಇಲ್ಲಾ ಮುಂದೆ ಯಾವತ್ತಾದರೂ ನಿಮ್ಮನ್ನು ಹಂಗಿಸಲು ಅದನ್ನೊಂದು ಅಸ್ತ್ರವಾಗಿ ಬಳಸಿಕೊಳ್ಳಲೂ ಬಹುದು. ನೀವು ಎಲ್ಲದಕ್ಕೂ ಸಿದ್ಧರಿದ್ದರೆ ನಿಮ್ಮ ತಪ್ಪು ಹೇಳಿಕೊಳ್ಳಿ. ಆದರೆ ನಿಮಗೀಗ ಮೊದಲಿನ ಹುಡುಗಿಯ ಜೊತೆ ಕಾಂಟೇಕ್ಟೇ ಇಲ್ಲದ್ದರಿಂದ ಅದನ್ನು ಈಗ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ ಅಂತ ಅನಿಸುತ್ತದೆ.