ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ನವಾಜ್ ಶರೀಫ್

ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫರನ್ನು ಹಿಂದೂ ದೇವಳ ಆಡಳಿತ ಮಂಡಳಿಯ ಪ್ರಮುಖರು ಸ್ವಾಗತಿಸುತ್ತಿರುವುದು.

ಮುಂಬರುವ ಚುನಾವಣೆಗಳಲ್ಲಿ ಸುಲಭವಾಗಿ ಗೆಲ್ಲುವ ಅವಕಾಶಗಳನ್ನು ಹೊಂದಿರುವ ಶರೀಫ್ ರಸ್ತೆ, ರೈಲು ಮತ್ತು ವಿದ್ಯುತ್ ಮೂಲ ಸೌಕರ್ಯಗಳಲ್ಲಿ ಚೀನಾದ 57 ಶತಕೋಟಿ ಡಾಲರ್ ಬಂಡವಾಳ ಹೂಡಿಕೆಯ ನಂತರ ತಮ್ಮ ಪುರೋಗಾಮಿ ಧೋರಣೆಯನ್ನು ಪ್ರದರ್ಶಿಸಲು ಯತ್ನಿಸುತ್ತಿದ್ದಾರೆ.

 

ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಪಂಜಾಬ್ ಪ್ರಾಂತ್ಯದಲ್ಲಿರುವ ಪುರಾತನ ಹಿಂದೂ ದೇವಾಲಯದ ಪುನರುತ್ಥಾನದ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ಮನ ಗೆಲ್ಲಲು ಯತ್ನಿಸಿರುವುದೇ ಅಲ್ಲದೆ ವಿದೇಶಗಳಲ್ಲಿ ಪಾಕಿಸ್ತಾನದ ವರ್ಚಸ್ಸನ್ನೂ ಹೆಚ್ಚಿಸಲು ಯತ್ನಿಸಿದ್ದಾರೆ.

ಆದರೆ ಈ ಭೇಟಿ ಮತ್ತು ಅಲ್ಪಸಂಖ್ಯಾತರ ನಂಬಿಕೆಗಳು ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ಕೆಲವು ಸಕಾರಾತ್ಮಕ ಕ್ರಮಗಳನ್ನು ಜರುಗಿಸುವ ಮೂಲಕ ನವಾಜ್ ಷರೀಫ್ ಮತಾಂಧ ಗುಂಪುಗಳ ಅವಕೃಪೆಗೆ ಪಾತ್ರರಾಗಿದ್ದಾರೆ. ಮಹಿಳಾ ಪರ ಶಾಸನವನ್ನು ಜಾರಿಗೊಳಿಸುವ ಮೂಲಕ ಶÀರೀಫ್ ಪ್ರಬಲ ಧಾರ್ಮಿಕ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದಕ್ಷಿಣ ಏಷಿಯಾದಲ್ಲಿ ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾದ ಕತಾಸ್ ರಾಜ್ ದೇವಾಲಯಗಳು 900 ವರ್ಷ ಹಳೆಯದಾಗಿದ್ದು ಈ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಶರೀಫ್  ಭಾರತದೊಡಗಿನ ಸ್ನೇಹ ಬಾಂಧವ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ದೇವಾಲಯಗಳಲ್ಲಿ ಕೆಲವು ಹಿಂದೂ ಧರ್ಮದ ಆಚರಣೆಗಳಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಶರೀಫ್ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರೈಸ್ತರೆಲ್ಲರೂ ಒಂದೇ ಎಂಬ ಸಂದೇಶ ನೀಡಿದ್ದಾರೆ.

ಹಿರಿಯ ಕ್ರೈಸ್ತ, ಸಿಖ್ ಮತ್ತು ಹಿಂದೂ ನಾಯಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನವಾಜ್ ಶರೀಫ್ ಇಸ್ಲಾಂನ ತತ್ವಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಮೂಲಕ ಇತರ ಧರ್ಮಗಳ ವಿರುದ್ಧ ದ್ವೇಷ ಸಾಧಿಸಲು ಪ್ರೇರೇಪಿಸುವ ಮುಸ್ಲಿಂ ಧಾರ್ಮಿಕ ನಾಯಕರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ದ್ವೇಷಪೂರಿತ ಉಪದೇಶಗಳನ್ನು ಯಾವುದೇ ಧಾರ್ಮಿಕ ನಾಯಕರೂ ಜನತೆಗೆ ನೀಡಕೂಡದು, ಜನಸಾಮಾನ್ಯರು ಇಂತಹ ಉಪನ್ಯಾಸಗಳನ್ನು ಕೇಳಲೂಕೂಡದು” ಎಂದು ಶರೀಫ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಧಾರ್ಮಿಕ ಮತಾಂಧರನ್ನು ನಿಗ್ರಹಿಸುವಲ್ಲಿ ಶರೀಪ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿರೋಧಿಗಳು ಟೀಕಿಸುತ್ತಿದ್ದು ಆಡಳಿತಾರೂಢ ಪಿಎಂಎಲ್ ಎನ್ ಪಕ್ಷದ ಕೆಲವು ಸದಸ್ಯರು ಉಗ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳೊಡನೆ ಸಂಪರ್ಕ ಹೊಂದಿರುವುದಾಗಿ ಆರೋಪಿಸಲಾಗಿದೆ. ಧಾರ್ಮಿಕ ಕಲಹ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಪ್ರಕರಣಗಳಿಂದ ಹೊರದೇಶಗಳಲ್ಲಿ ತನ್ನ ಘನತೆ ಮತ್ತು ವರ್ಚಸ್ಸು ಕಳೆದುಕೊಂಡಿರುವ ಪಾಕಿಸ್ತಾನವನ್ನು ಈ  ಆರೋಪದಿಂದ ಮುಕ್ತಗೊಳಿಸಲು ಶರೀಪ್ ಶ್ರಮಿಸಿಲ್ಲ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ.

2018ರಲ್ಲಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು ಈ ಹಿನ್ನೆಲೆಯಲ್ಲೇ ಅಲ್ಪಸಂಖ್ಯಾತರನ್ನು ಸಂತೃಪ್ತಿಪಡಿಸಲು ಶರೀಪ್ ಕತಾಸ್ ರಾಜ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಪಾಕಿಸ್ತಾನದ 19 ಕೋಟಿ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಕೇವಲ ಶೇ 3ರಷ್ಟಿದ್ದು ಕೆಲವು ಪ್ರಾಂತ್ಯಗಳಲ್ಲಿ, ವಿಶೇಷವಾಗಿ ಸಿಂದ್ ಮತ್ತು ಪಂಜಾಬದಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿ ಪರಿಣಮಿಸುತ್ತವೆ. ಕಳೆದ ವರ್ಷ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಅಬ್ದುಸ್ ಸಲಾಂ ಹೆಸರಿನಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿದ ಶರೀಫ್  ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ವಿಜ್ಞಾನಿಗೆ ಸಾರ್ವಜನಿಕ ಮನ್ನಣೆ ನೀಡಿದ್ದಾರೆ. ವಿಶ್ವವಿದ್ಯಾಲಯಕ್ಕೆ ಅಬ್ದುಸ್ ಸಲಾಮ್ ಹೆಸರನ್ನಿಟ್ಟ ನಂತರ ಕೆಲವು ಮೂಲಭೂತವಾದಿಗಳು ಅಹಮದಿಯಾ ಮಸೀದಿಯೊಂದನ್ನು ಭಸ್ಮ ಮಾಡಿದ್ದಾರೆ.

ಮುಂಬರುವ ಚುನಾವಣೆಗಳಲ್ಲಿ ಸುಲಭವಾಗಿ ಗೆಲ್ಲುವ ಅವಕಾಶಗಳನ್ನು ಹೊಂದಿರುವ ಶರೀಫ್ ರಸ್ತೆ, ರೈಲು ಮತ್ತು ವಿದ್ಯುತ್ ಮೂಲ ಸೌಕರ್ಯಗಳಲ್ಲಿ ಚೀನಾದ 57 ಶತಕೋಟಿ ಡಾಲರ್ ಬಂಡವಾಳ ಹೂಡಿಕೆಯ ನಂತರ ತಮ್ಮ ಪುರೋಗಾಮಿ ಧೋರಣೆಯನ್ನು ಪ್ರದರ್ಶಿಸಲು ಯತ್ನಿಸುತ್ತಿದ್ದಾರೆ. ನವಾಜ್ ಶರೀಫ್ ಸೋದರ ಶೆಬಾಜ್ ಆಳ್ವಿಕೆಯಲ್ಲಿರುವ ಪಂಜಾಬ್‍ನಲ್ಲಿ ಮಹಿಳಾ ರಕ್ಷಣಾ ಮಸೂದೆಯನ್ನು ಜಾರಿಗೊಳಿಸಲಾಗಿದ್ದು ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಒದಗಿಸಲಾಗಿದೆ.