ಹಲವು ದಲಿತರ ಬಾಳನ್ನು ಬೆಳಗಿದ `ನವೋದಯಂ’

ಗ್ರಾಮೀಣ ದಲಿತ ಮಹಿಳೆಯರ ಈ ಪತ್ರಿಕೆಯ ಸಾಧನೆ ಅನನ್ಯ
ಹದಿನಾರು ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವಿವಿಧ ಮಂಡಲಗಳ ಸ್ವಹಾಯ ಗುಂಪುಗಳ `ಮಹಿಳಾ ಸಂಘಂ’ ಇದರ 23 ನಾಯಕಿಯರನ್ನು ತಿರುಪತಿಯಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ತರಬೇತಿ ಕಾರ್ಯಕ್ರಮವೊಂದಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆಲ್ಲಾ ಅವರ ಹಳ್ಳಿಯ ನಾಗರಿಕ ಸಮಸ್ಯೆಗಳ ಬಗ್ಗೆ ಒಂದು ಸಣ್ಣ ಲೇಖನ ಬರೆದು ಸ್ಥಳೀಯ ಪತ್ರಿಕೆಯೊಂದಕ್ಕೆ ಕಳುಹಿಸುವಂತೆ ಹೇಳಲಾಯಿತು.
ಅವರೆಲ್ಲಾ ಅಷ್ಟೊಂದು ಶಿಕ್ಷಿತರಲ್ಲದೇ ಇದ್ದರೂ ತಮಗೆ ಗೊತ್ತಿರುವ ಸರಳ ತೆಲುಗು ಭಾಷೆಯಲ್ಲಿ ತಮ್ಮ ಗ್ರಾಮಗಳ ಸಮಸ್ಯೆಯ ಬಗ್ಗೆ ಬರೆದಿದ್ದರು. ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದ ಮಹಿಳೆಯರಲ್ಲಿ ಒಬ್ಬರಾಗಿದ್ದ ಮಂಜುಳಾ 2001ರಲ್ಲಿ ದಲಿತ ಮಹಿಳೆಯರಿಂದಲೇ ನಡೆಸಲ್ಪಡುವ `ನವೋದಯಂ’ ಎಂಬ ಮಾಸಿಕ ಪುರವಣಿಯ ಪ್ರಪ್ರಥಮ ಸಂಪಾದಕಿಯಾದರು. ಈ ಮಹತ್ತರ ಘಟನೆ ಮಂಜುಳಾ ಅವರ ಜೀವನದ ಗತಿಯನ್ನೇ ಬದಲಾಯಿಸಿಬಿಟ್ಟಿತು. ಈ ಪತ್ರಿಕೆಯ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿದವರಾದ ಮಂಜುಳಾ ಇಂದು ಆತ್ಮವಿಶ್ವಾಸದ ಸಂಕೇತವಾಗಿ ಹೊರಹೊಮ್ಮಿದ್ದಾರೆ.
ಆಗಸ್ಟ್ 2001ರಲ್ಲಿ ಪ್ರಥಮ ಸಂಚಿಕೆಯನ್ನು ಹೊರತಂದ `ನವೋದಯಂ’ ಆಗ ತನ್ನ ಎಂಟು ಪುಟಗಳ 750 ಪ್ರತಿಗಳನ್ನು ಮುದ್ರ್ರಿಸಿತ್ತು. ಈಗ ಅದು ಪ್ರತಿ ತಿಂಗಳು 20 ಪುಟಗಳ ಪುರವಣಿಯನ್ನು ಹೊರತರುತ್ತಿದೆ. ದಲಿತ ಮಹಿಳೆಯರಿಂದಲೇ ನಡೆಸಲ್ಪಡುವ ಅದಕ್ಕೆ ಜಿಲ್ಲೆಯಾದ್ಯಂತ ಒಟ್ಟು 40,000 ಚಂದಾದಾರರು ಹಾಗೂ 4 ಲಕ್ಷಕೂ ್ಕಅಧಿಕ ಓದುಗರಿದ್ದಾರೆ.
“ಆರಂಭದಲ್ಲಿ ನಮಗೆ ಪತ್ರಿಕೋದ್ಯಮವೇನೆಂದೇ ತಿಳಿದಿರಲಿಲ್ಲ. ನಾವು ಕೇವಲ ಆರು ಮಂದಿ ಇದ್ದೆವು. ನಿಧಾನವಾಗಿ ಪತ್ರಿಕೋದ್ಯಮದ ಸೂಕ್ಷ್ಮತೆಗಳನ್ನು ಅರಿತು ನಮ್ಮ ಗ್ರಾಮಗಳ ಬಗ್ಗೆಯೇ ಮಾಹಿತಿ ಸಂಗ್ರಹಿಸಿ ವರದಿ ಮಾಡಲಾರಂಭಿಸಿದೆವು” ಎಂದು ಮಂಜುಳಾ ಹೇಳುತ್ತಾರೆ.
ಅಂದಿನ ಅವಿಭಜಿತ ಆಂಧ್ರ ಪ್ರದೇಶ ಸರಕಾರದ ಬಡತನ ನಿರ್ಮೂಲನಾ ಕಾರ್ಯಕ್ರಮ `ವೆಲುಗು” ಭಾಗವಾಗಿ ಈ ಪುರವಣಿಯನ್ನು ಹೊರತರಲಾಗಿತ್ತು.
ಕೇವಲ ಆರು ಮಂದಿ ಮಹಿಳಾ ಉದ್ಯೋಗಿಗಳ ಸಹಕಾರದಿಂದ ಆರಂಭಗೊಂಡ ಈ ಪತ್ರಿಕೆಯ ವಿತರಣೆಯ ಜವಾಬ್ದಾರಿಯನ್ನೂ ಮಹಿಳೆಯರೇ ಹೊತ್ತಿದ್ದರು. “ಪತ್ರಿಕೆ ಆರಂಭವಾದ ಮೂರ್ನಾಲ್ಕು ವರ್ಷಗಳ ನಂತರ ಈ ಮಹಿಳೆಯರ ಕೈಗೆ ಆಗಿನ ರೀಲ್ ಕ್ಯಾಮರಾ ಬಂದಿತ್ತು.
ಇಂದು `ನವೋದಯಂ’ ಪತ್ರಿಕೆಯ ಜತೆಯಿರುವ ಪತ್ರಕರ್ತರು ವೀಡಿಯೋ ಕ್ಯಾಮರಾಗಳಲ್ಲೂ ವಿವಿಧ ಘಟನೆಗಳನ್ನು ಸೆರೆ ಹಿಡಿಯುತ್ತಾರೆ.
ಗ್ರಾಮೀಣ ಮಹಿಳೆಯರ ದನಿಯಾಗಿ, ಪತ್ರಿಕೋದ್ಯಮದ ಮೂಲಕ ಗ್ರಾಮೀಣ, ಬಡ ಮಹಿಳೆಯರ ಸಬಲೀಕರಣಕ್ಕಾಗಿ ಈ ಪತ್ರಿಕೆ ಶ್ರಮಿಸುತ್ತಿದೆ.
ಇಂದು `ನವೋದಯಂ’ ತಂಡದಲ್ಲಿ 12 ಮಂದಿ ಖಾಯಂ ಸದಸ್ಯರಿದ್ದಾರೆ ಹಾಗೂ ಪತ್ರಿಕೆಗೆ ಲೇಖನಗಳನ್ನು ಬರೆದುಕೊಡುವ ಹೊರಗಿನವರೂ ಇದ್ದಾರೆ. ಓದುಗರ ಮನ ತಟ್ಟುವಂತಹ ವರದಿಗಳಿಗೆ `ನವೋದಯಂ’ ಹೆಚ್ಚಿನ ಒತ್ತು ನೀಡುತ್ತಿದೆ.
ಈಗಲೂ `ನವೋದಯಂ’ ಪ್ರಕಟವಾಗುತ್ತಿದ್ದರೂ ಅದರ ಆದಾಯ ಹೇಳುವಷ್ಟಿಲ್ಲ. ಜಾಹೀರಾತುಗಳು ವಿರಳವಾಗಿವೆ. ಮೇಲಾಗಿ ಅದಕ್ಕೆ ಸರಕಾರದ ಸಹಾಯವೂ ದೊರಕುತ್ತಿಲ್ಲ. ಕೆಲವೊಮ್ಮೆ ಸಿಬ್ಬಂದಿಗೆ ಒಂದೆರಡು ತಿಂಗಳು ವೇತನ ನೀಡಲೂ ಕಷ್ಟವಾಗುತ್ತದೆ. ಸ್ವಸಹಾಯ ಗುಂಪುಗಳ ಸಂಘಟನೆ ಜಿಲ್ಲಾ ಸಮಖ್ಯದಿಂದ ಸ್ವಲ್ಪ ಮಟ್ಟಿನ ಧನಸಹಾಯ ದೊರಕುತ್ತಿದೆ ಎನ್ನುತ್ತಾರೆ ಮಂಜುಳಾ.
ಎಲ್ಲಾ ಎಡರು ತೊಡರುಗಳ ಹೊರತಾಗಿಯೂ ಸಮಾಜದಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು `ನವೋದಯಂ’ ಸಫಲವಾಗಿದೆಯೆಂಬುದು ಅವರಿಗೆ ಬಹಳಷ್ಟು ಸಮಾಧಾನ ತಂದಿದೆ. ಏಳು ಬೀಳುಗಳೇನಿದ್ದರೂ `ನವೋದಯಂ’ ಜತೆಗಿನ ನನ್ನ ಬಾಂಧವ್ಯದ ಬಗ್ಗೆ ನನಗೆ ಅಭಿಮಾನವಿದೆ ಎಂದು ಹೇಳುತ್ತಾರೆ ಮಂಜುಳಾ.