ನವರಾತ್ರಿ ಗೌಜಿಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ಅದ್ವೈತ ತತ್ವ ಪ್ರತಿಪಾದಕ ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಉಡುಪಿ ಜಿಲ್ಲೆಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ  ಹಾಗೂ ಪ್ರಸಿದ್ಧ ದೇವಾಲಯವಾದ ಕೊಲ್ಲೂರಿನಲ್ಲಿ ನವರಾತ್ರಿ ಉತ್ಸವವು  ಆರಂಭಗೊಂಡಿದೆ. ಕೇರಳ, ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶ ರಾಜ್ಯಗಳ ಭಕ್ತರು ಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕಳಶ ಸ್ಥಾಪನೆ ವಿಧಿ-ವಿಧಾನವು ಗುರುವಾರ ಬೆಳಿಗ್ಗೆ 7 ಗಂಟೆಗೆ ನೆರವೇರಲಿದೆ. ಚಂಡಿಕಾ ಯಾಗವು ಮಹಾನವಮಿ ಹಬ್ಬದಂದು ಅಂದರೆ ಸೆಪ್ಟೆಂಬರ್ 29ರಂದು ಬೆಳಗ್ಗೆ 11.30 ಗಂಟೆಗೆ ನಡೆಯಲಿದೆ. ಅದೇ ದಿನ ಸಂಜೆ 8.45 ಗಂಟೆಗೆ ರಥೋತ್ಸವ ಜರುಗಲಿದೆ.

ಸೆಪ್ಟೆಂಬರ್ 30ರಂದು ವಿಜಯದಶಮಿ ಹಬ್ಬದ ಆಕರ್ಷಣೆಯಾಗಿ ವಿದ್ಯಾರಂಭ ವಿಧಿ-ವಿಧಾನವು ದೇವಾಲಯದ ಸರಸ್ವತಿ ಮಂದಿರಲ್ಲಿ ಬೆಳಗ್ಗೆ 4 ಗಂಟೆಗೆ ಆರಂಭವಾಗಲಿದೆ. ಹಬ್ಬದಲ್ಲಿ ವಿದ್ಯಾರಂಭಿಸುವ 2ರಿಂದ 3 ವರ್ಷದೊಳಗಿನ ಮಕ್ಕಳ ನಾಲಿಗೆಯಲ್ಲಿ ಓಂ ಎಂಬ ಪದವನ್ನು ಅರಿಶಿಣ ಕಡ್ಡಿಯಲ್ಲಿ ಬರೆಯಲಾಗುತ್ತದೆ. ನಂತರ ಮಕ್ಕಳಿಗೆ ಅಕ್ಷರಗಳನ್ನು ಅಕ್ಕಿ ಧಾನ್ಯದ ಮೇಲೆ ಬರೆಸಲಾಗುತ್ತದೆ. ಈ ಬಾರಿ ಸುಮಾರು 2,500ಕ್ಕೂ ಹೆಚ್ಚು ಮಕ್ಕಳು ವಿದ್ಯಾರಂಭ ಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅದೇ ದಿನ ಸಂಜೆ 5.30 ಗಂಟೆಗೆ ವಿಜಯೋತ್ಸವ ನಡೆಯಲಿದೆ. ವಿಜಯೋತ್ಸವದ ಸಂದರ್ಭ ದೇವಿ ಮೂಕಾಂಬಿಕೆಯನ್ನು ಕೊಲ್ಲೂರಿನಿಂದ ಒಂದು ಕಿ ಮೀ ದೂರದಲ್ಲಿರುವ ಶುಕ್ಲ ತೀರ್ಥಕ್ಕೆ ಕೊಂಡೊಯ್ದು ಬರುತ್ತಾರೆ. ನವರಾತ್ರಿ ಪ್ರತಿದಿನ ದೇವಿ ಮೂಕಾಂಬಿಕೆಯನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗುತ್ತದೆ.

ಭಕ್ತರಿಗೆ ಮಾರ್ಗದರ್ಶನಕ್ಕಾಗಿ ಮಾಹಿತು ಕೇಂದ್ರವನ್ನು ದೇವಸ್ಥಾನದ ಪ್ರವೇಶ ಭಾಗದಲ್ಲಿ ಅಸ್ಥಿತ್ವಗೊಳಿಸಲಾಗುತ್ತದೆ ಎಂದು ದೇವಸ್ಥಾನದ ಸಹಾಯಕ ಕಾರ್ಯಕಾರಿ ಅಧಿಕಾರಿ ಎಚ್ ಕೃಷ್ಣಮೂರ್ತಿ ತಿಳಿಸಿದ್ದಾರೆ. ಜಗದಾಂಬಿಕಾ ಆಡಳಿತ ವಿಭಾಗದಲ್ಲಿ ತುರ್ತು ಆರೋಗ್ಯ ಕೇಂದ್ರ ಕಾರ್ಯಾರಂಭಿಸಲಿದೆ. ಹೈಸ್ಕೂಲು ಮೈದಾನದಲ್ಲಿ ಅಥವಾ ಬಸ್ಸು ನಿಲ್ದಾಣದ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗೆ ಸ್ಥಳ ಲಭ್ಯವಿರುವುದು. ಸೆಪ್ಟೆಂಬರ್ 30ರ ವರೆಗೆ ಭಕ್ತರಿಗೆ ಬೆಳಗ್ಗೆ 8 ರಿಂದ 9 ಗಂಟೆವರೆಗೆ ಉಪಹಾರ ದೊರೆಯಲಿದೆ. ಮಧ್ಯಾಹ್ನ ಊಟ ಲಭ್ಯವಿರುತ್ತದೆ ಮತ್ತು ನವೆಂಬರ್ 5ರ ವರೆಗೆ ರಾತ್ರಿ ಊಟವೂ ಇರುತ್ತದೆ. ಪ್ರತಿದಿನ ಸಂಜೆ 3ರಿಂದ 10 ಗಂಟೆವರೆಗೆ ದೇವಸ್ಥಾನದ ಸ್ವರ್ಣಮುಖಿ ಮಂಟಪದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಸೆಪ್ಟೆಂಬರ್ 30ರಂದು ಸುಮಾರು 15,000 ರಿಂದ 20,000 ಭಕ್ತರು ಆಗಮಿಸುವ ನಿರೀಕ್ಷೆಯಿದೆ. 2 ದಿನಗಳಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷ ಬಸ್ಸುಗಳನ್ನು ಬೈಂದೂರಿನಿಂದ ಕುಂದಾಪುರಕ್ಕೆ ಓಡಿಸಲಿದೆ.