ನಿರಂಜನ ವಾನಳ್ಳಿಗೆ ರಾಷ್ಟ್ರೀಯ ಪುರಸ್ಕಾರ

ಪ್ರಶಸ್ತಿ ಸ್ವೀಕರಿಸಿದ ನಿರಂಜನ ವಾನಳ್ಳಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕನ್ನಡದ ಹಿರಿಯ ಫ್ರೀಲಾನ್ಸ್ ಪತ್ರಕರ್ತ ಹಾಗೂ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ನಿರಂಜನ ವಾನಳ್ಳಿಯವರು ನಿರ್ದೇಶಿಸಿದ ಕಿರುಚಿತ್ರವೊಂದಕ್ಕೆ ರಾಷ್ಟ್ರೀಯ ಪುರಸ್ಕಾರ ಲಭ್ಯವಾಗಿದೆ.

ಕೇಂದ್ರ ಸರ್ಕಾರದ ಪಂಚಾಯತ ರಾಜ್ ಮಂತ್ರಾಲಯ ಕರೆದಿದ್ದ ಪಂಚಾಯತ್ ರಾಜ್ ಸಂಸ್ಥೆಗಳ ಕುರಿತ ಕಿರುಚಿತ್ರ ಸ್ಪರ್ಧೆಯಲ್ಲಿ ವಾನಳ್ಳಿ ಯವರು ಬರೆದು ನಿರ್ದೇಶಿಸಿದ `ಲೈಲಾ ಗೋಲ್ಡ್’ ಎಂಬ ಕಿರುಚಿತ್ರವು ಸ್ಪರ್ಧೆಗೆ ಬಂದಿದ್ದ 510 ಚಿತ್ರಗಳ ಪೈಕಿ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿದೆ.

ಪುರಸ್ಕಾರವು ಏಳೂವರೆ ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಚಿತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲೈಲಾ ಗ್ರಾಮ ಪಂಚಾಯತಿ ಕುರಿತಾದುದಾಗಿದೆ. ಲೈಲಾ ಪಂಚಾಯತಿಯಲ್ಲ್ಲಿ ಮನೆಮನೆಯಿಂದ ಕಸ ಸಂಗ್ರಹಿಸಿ ಸಾವಯವ ಗೊಬ್ಬರ ತಯಾರಿಸಿ `ಲೈಲಾ ಗೋಲ್ಡ್’ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಇದು ದಕ್ಷಿಣ ಕನ್ನಡದಾದ್ಯಂತ ಜನಪ್ರಿಯವಾಗಿದ್ದು, ಪಂಚಾಯತಕ್ಕೆ ಆದಾಯ ತರುವ ಜೊತೆಗೆ ಪರಿಸರದ ಸ್ವಚ್ಛತೆಗೆ ಕಾರಣವಾಗಿದೆ. ಇದರ ಹಿನ್ನೆಲೆಯಲ್ಲಿ ವಾನಳ್ಳಿಯವರು ಸ್ಪರ್ಧೆಯ ನಿಯಮಕ್ಕನುಗುಣವಾಗಿ `ಲೈಲಾ ಗೋಲ್’್ಡ ಎಂಬ 3 ನಿಮಿಷದ ಚಿತ್ರ ತಯಾರಿಸಿದ್ದು, ಈ ಕಿರುಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭ್ಯವಾಗಿದೆ.

ನವೆಂಬರ್ 30ರಂದು ನವದೆಹಲಿಯಲ್ಲಿ ನಡೆದÀ ಕಾರ್ಯಕ್ರಮದಲ್ಲಿ ನಿರಂಜನ ವಾನಳ್ಳಿ ಪ್ರಶಸ್ತಿ ಸ್ವೀಕರಿಸಿದರು. ವಾನಳ್ಳಿಯವರಿಗೆ ಸಂದ ಈ ಪುರಸ್ಕಾರ ಕರ್ನಾಟಕಕ್ಕೆ ಸಂದ ಗೌರವವಾಗಿದೆ. ಈ ಚಿತ್ರಕ್ಕೆ ಮೈಸೂರಿನ ಕೀರ್ತಿ ಕುಮಾರ್, ಕೆ ಗೋಪೀನಾಥ್ ಮತ್ತು ಸಿದ್ಧೇಶ್ವರ್ ಸಹಕಾರ ನೀಡಿದ್ದಾರೆ.