ಮೂರ್ಖತನದ ನಿರ್ಧಾರದಿಂದ ದೇಶವಿಡೀ ಅಲ್ಲೋಲಕಲ್ಲೋಲ

ದಾರ್ಶನಿಕ ಸಾಕ್ರೋಟೀಸ್ ಹೇಳಿದ ಒಂದು ನಾಣ್ಣುಡಿಯ ಅರ್ಥ ಹೀಗಿದೆ :  ಬುದ್ದಿವಂತನ ಜತೆ ಬದುಕುವುದು ಸುಲಭ, ಯಾಕೆಂದರೆ ಅವನು ಎಲ್ಲರ ಕಷ್ಟಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾನೆ.  ದಡ್ಡರೊಂದಿಗೆ ಬದುಕುವುದೂ ಕಷ್ಟವಾಗಲಾರದು, ಯಾಕೆಂದರೆ ಅವನು ಇತರರ ಮಾರ್ಗದರ್ಶನಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾನೆ.  ಆದರೆ ತಾನು ಬುದ್ದಿವಂತ ಎಂದು ತಿಳಿದುಕೊಂಡಿರುವ ದಡ್ಡನೊಂದಿಗೆ ಬದುಕುವದು ಮಾತ್ರ ತುಂಬಾ ಕಷ್ಟ. ಯಾಕೆಂದರೆ ಅವನಿಗೆ ಒಂದೆಡೆ ಸ್ವಂತ ಬುದ್ದಿಯೂ ಇಲ್ಲ, ಇನ್ನೊಂದೆಡೆ ಇತರರ ಮಾರ್ಗದರ್ಶನವನ್ನೂ ಸ್ವೀಕರಿಸುವುದಿಲ್ಲ. ಹಾಗಾಗಿ ತಾನೇ ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಮನೆಯ ಎಲ್ಲರಿಗೂ ಅಪಾಯ ತರುತ್ತಾನೆ.

ತಾನು ಮಹಾ ಬುದ್ದಿವಂತನೆಂದು ತಿಳಿದು ಮೂರ್ಖ ನಿರ್ಣಯಗಳನ್ನು ತೆಗೆದುಕೊಂಡು ಇಡೀ ದೇಶವನ್ನು ಅಲ್ಲೋಲಕಲ್ಲೋಲ ಮಾಡಿ ಬಡ ಜನರ ಜೀವನ ಅಸ್ತವ್ಯಸ್ತ ಮಾಡಿರುವ ವ್ಯಕ್ತಿಯೇ ಈಗ ನಮ್ಮ ದೇಶವನ್ನು ಆಳುತ್ತಿರುವುದು. ಇವರು ಮಾಡಿದ್ದೆಲ್ಲಾ ಸರಿ ಎನ್ನುವ ಮೂರ್ಖರು ಸುತ್ತಮುತ್ತ ತುಂಬಿರುವಾಗ ಮುಂದೆ ಒಳ್ಳೆಯದಾಗುತ್ತದೆ ಎಂದು ಮೂಗಿಗೆ ತುಪ್ಪ ಸವರಿ ಆಕಾಶ ತೋರಿಸಿ ಎಷ್ಟು ದಿನ  ಜನರನ್ನು ಮಂಗ ಮಾಡಲು ಸಾಧ್ಯ ? ಇಂದು ಹೊಟ್ಟೆಗಿಲ್ಲದೇ ಸಾಯುವವರು ನಾಳೆಯ ನಿರೀಕ್ಷೆಯಲ್ಲಿ ಜೀವ ಹಿಡಿದುಕೊಳ್ಳಲು ಸಾಧ್ಯವೇ ?  ಮೂರ್ಖ ಭಕ್ತರಲ್ಲಿ ಸಾಕ್ರೊಟೀಸನ ಜಾಣನುಡಿಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಬೌದ್ಧಿಕ ಶಕ್ತಿ ಉಳ್ಳವರು ಇದ್ದಾರೆಯೇ ಎಂಬ ಅನುಮಾನ ಜನರಿಗೆ ಇದೆ.

ತುಳುವಿನಲ್ಲಿ ಒಂದು ಒಳ್ಳೆಯ ಹಳೇ ಗಾದೆ ಇದೆ – ಗಂಡ ಹೊಸ ಸೀರೆ ತರುತ್ತಾನೆ ಎಂದು ಹೆಂಡತಿ ತನ್ನ ಹಳೆಯ ಸೀರೆಗಳನ್ನೆಲ್ಲಾ ಬಚ್ಚಲಿನ ಬೆಂಕಿಗೆ ಹಾಕಿ ನೀರು ಕಾಯಿಸಿ ಬೆತ್ತಲೆ ಕುಳಿತಳಂತೆ.  ಇಂದಿನ ನೋಟು ರದ್ದತಿಯ ಪರಿಸ್ಥಿತಿಗೆ ಈ ಗಾದೆ ಸರಿಯಾಗಿ ಅನ್ವಯವಾಗುತ್ತದೆ. ಆದರೆ ಭಕ್ತಿಯ ಭರದಲ್ಲಿ ಕುರುಡ ಕಿವುಡ ಎರಡೂ ಆಗಿರುವವರಿಗೆ ಇದೆಲ್ಲಾ ಎಲ್ಲಿ ಅರ್ಥವಾಗುತ್ತದೆ ಬಿಡಿ. ಇವರಿಗೆ ಸಮಯವೇ ಪಾಠ ಕಲಿಸಬೇಕು. ಶ್ರೀಕೃಷ್ಣನು ಧರ್ಮ ರಕ್ಷಣೆಗಾಗಿ ಕುರುಕ್ಷೇತ್ರ ಯುದ್ಧ ರಚಿಸಿದ್ದಂತೆ. ಕುರುಕ್ಷೇತ್ರ ಯುದ್ಧ ಮುಗಿದಾಗ ದೇಶದಲ್ಲಿ ಒಬ್ಬನೂ ಗಂಡಸು ಉಳಿಯಲಿಲ್ಲ. ಉಳಿದಿದ್ದು ಕೇವಲ 12 ಜನರು ಮಾತ್ರ. ಕೇವಲ ಇಷ್ಟೇ ಜನರಿಗಾಗಿ ಧರ್ಮ ರಕ್ಷಿಸಿದ್ದೇ ?  ಈ 12 ಜನರಿಗಾಗಿ 75 ಲಕ್ಷ ಅಮಾಯಕ ಯೋಧರನ್ನು ಮತ್ತು ಸೇವಕರನ್ನು ಕೊಂದು ರಕ್ಷಿಸಿದ ಧರ್ಮ ಕೊನೆಗೆ ಕೇವಲ ಒಂದು ಹಿಡಿಯಷ್ಟು ಸ್ವಾರ್ಥಿಗಳ ಉಪಯೋಗಕ್ಕೆ ಬಂತು ಅಷ್ಟೇ. ಹಾಗೆಯೇ ಹಿಟ್ಲರನ ಜರ್ಮನಿ ಜರ್ಮನರ ಉಪಯೋಗಕ್ಕೆ ಬಂತೇ ?  ವಿಕ್ಷಿಪ್ತ  ಭಾರತವೂ ಕೊನೆಗೆ ಹಾಗೇ ಆಗುವಂತೆ ಕಾಣುತ್ತಿದೆ. ಒಳ್ಳೆಯ ದಿನ ಬರುವ ಹೊತ್ತಿಗೆ ಒಳ್ಳೆಯವರು ಸತ್ತು ಹೆಣ ಹೊತ್ತು ಮುಗಿದಿರುತ್ತದೆ.

  • ಉದಯರಾಜ್  ಬಿ  ಆಳ್ವಾ, ಕಾಟಿಪಲ್ಲ (ದ ಕ)