ಲಾರಿಗೆ ಬೈಕ್ ಡಿಕ್ಕಿ : ಯುವಕರಿಬ್ಬರು ಪಾರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಮಣಿಪಾಲದ ಸೆಕೆಂಡ್ಸ್ ಬಜಾರಿಗೆ ಹೋಗಿ ಬೈಕೊಂದನ್ನು ಗೊತ್ತು ಮಾಡಿ ಪಡುಬಿದ್ರಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವಕರಿಬ್ಬರು, ಕೊಬ್ಬರಿ ಸಾಗಿಸುತ್ತಿದ್ದ ಲಾರಿಗೆ ಎರ್ಮಾಳು ನೆರಳ್ತಾಯ ಗುಡಿ ಮುಂಭಾಗ ಡಿಕ್ಕಿಯಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಡುಬಿದ್ರಿ ನಿವಾಸಿ ಸಚಿನ್ ಹಾಗೂ ಪಡುಬಿದ್ರಿ ಬ್ರಹ್ಮಸ್ಥಾನ ರಸ್ತೆ ಸಮೀಪದ ನಿವಾಸಿ ಯತೀಶ ಗಾಯಗೊಂಡವರು.

ಮುಂದಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಲಾರಿಯ ಬಲಬದಿಗೆ ಡಿಕ್ಕಿಯಾಗಿ, ಲಾರಿಯ ಹಿಂದಿನಿಂದ ಬರುತ್ತಿದ್ದ ಕೈಂಟನರ್ ವಾಹನದ ಅಡಿಭಾಗಕ್ಕೆ ಆ ಯುವಕರಿಬ್ಬರು ಎಸೆಯಲ್ಪಟ್ಟಿದ್ದಾರೆ. ಕೈಂಟನರ್ ಚಾಲಕನ ಸಮಯ ಪ್ರಜ್ಞೆಯಿಂದ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಈ ಯುವಕರಿಬ್ಬರು ಬದುಕಿ ಉಳಿದಿದ್ದು, ಒಂದಿಷ್ಟು ಕೈಂಟನರ್ ಚಲಿಸಿದ್ದರೂ ಯುವಕರ ಪ್ರಾಣಕ್ಕೆ ಕುತ್ತಾಗುತ್ತಿತ್ತು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಆತಂಕದಿಂದ ಹೇಳುತ್ತಾರೆ. ಯುವಕರಿಬ್ಬರೂ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.