ಮೋದಿ ಹುಟ್ಟುಹಬ್ಬದಂದು ಪ್ರತಿಭಟನೆಗೆ ಸಜ್ಜಾಗುತ್ತಿರುವ ನರ್ಮದಾ ಸಂತ್ರಸ್ತರು

ನರ್ಮದಾ ಬಚಾವೋ ಆಂದೋಲನ (ಎನ್‍ಬಿಎ) ನೇತೃತ್ವದ ಈಗಿನ ಪ್ರತಿಭಟನೆಯಲ್ಲಿ ನರ್ಮದಾ ಕಣಿವೆ ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಕಾರ್ಯದರ್ಶಿ ರಜನೀಶ್ ವೈಶ್ ಜೊತೆಗೆ ತೀವ್ರ ಚರ್ಚೆಯೂ ನಡೆಯಿತು.

ಪ್ರಧಾನಿ ನರೇಂದ್ರ ಮೋದಿಯ ಹುಟ್ಟುಹಬ್ಬದಂದು ನರ್ಮದಾ ಅಣೆಕಟ್ಟೆಯ ಬಳಿ ವಿಶಿಷ್ಟವಾದ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಅಣೆಕಟ್ಟೆಯಿಂದಾಗಿ ಸ್ಥಳಾಂತರಗೊಂಡಿರುವ ಸುಮಾರು 30 ಮಂದಿ ತಲೆ ಬೋಳಿಸಿಕೊಂಡು ಮಧ್ಯಪ್ರದೇಶ ಸರ್ಕಾರ ಸತ್ತು ಹೋಗಿದೆ ಎನ್ನುತ್ತಿದ್ದಾರೆ. ಮೋದಿ ಹುಟ್ಟುಹಬ್ಬದಂದು ಸಂಪೂರ್ಣ ನರ್ಮದಾ ಅಣೆಕಟ್ಟೆಯನ್ನು ದೇಶಕ್ಕೆ ಅರ್ಪಿಸುವ ಕಾರಣ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದೆ.

ಸವಾಲು-ಪ್ರತಿಭಟನೆ ಎನ್ನುವ ಹೋರಾಟವು ಭೋಪಾಲದ ನೀಲಂ ಪಾರ್ಕಿನಲ್ಲಿ ಎರಡು ಗಂಟೆಗಳ ಕಾಲ ನಡೆಯಿತು. ಈ ಸಂದರ್ಭದಲ್ಲಿ ಮೋದಿ ಹುಟ್ಟುಹಬ್ಬದಂದು ನಡೆಸುವ ಪ್ರತಿಭಟನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. `ನರ್ಮದಾ ಕಣಿವೆಯ ಆದಿವಾಸಿಗಳು, ರೈತರು, ದಲಿತರು, ಕಾರ್ಮಿಕರು, ಮೀನುಗಾರರು, ಕಲಾವಿದರು, ಮಹಿಳೆಯರು, ಮಕ್ಕಳು ಮತ್ತು ಇತರರು ದೊಡ್ಡ ಸಂಕಷ್ಟದಲ್ಲಿರುವಾಗ ಪ್ರಧಾನಿ ಹುಟ್ಟುಹಬ್ಬಕ್ಕೆ ಬಿಜೆಪಿ ನೇತೃತ್ವದ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ’ ಎಂದು ಆಕ್ರೋಶ ವ್ಯಕ್ತವಾಯಿತು.

ಕಣಿವೆಯ ಜನರು ಮತ್ತು ಬೆಂಬಲಿಗರು ಅನ್ಯಾಯದ ಮುಳುಗಡೆಯನ್ನು ವಿರೋಧಿಸಿ ಪನರ್ವಸತಿಗಾಗಿ ಬೇಡಿಕೆ ಇಡಲಿದ್ದಾರೆ. ಮೋದಿ ರಾಜಕೀಯ ಕಾರಣಕ್ಕಾಗಿ ಸಂಭ್ರಮಾಚರಣೆ ಆಯೋಜಿಸುತ್ತಿದ್ದಾರೆ ಎಂದು ಅವರು ಸಿಟ್ಟಾಗಿದ್ದಾರೆ. ಮೋದಿ ಹುಟ್ಟುಹಬ್ಬದಂದು ಬದ್ರಾದಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸಲಾಗುವುದು. ಇಲ್ಲಿ ಹಲವು ಧಾರ್ಮಿಕ ಸ್ಥಳಗಳೂ ಮುಳುಗಡೆಯಾಗಿರುವುದನ್ನು ಸರ್ಕಾರಿ ವರದಿಗಳೇ ಒಪ್ಪಿಕೊಂಡಿವೆ.

ನರ್ಮದಾ ಬಚಾವೋ ಆಂದೋಲನ (ಎನ್‍ಬಿಎ) ನೇತೃತ್ವದ ಈಗಿನ ಪ್ರತಿಭಟನೆಯಲ್ಲಿ ನರ್ಮದಾ ಕಣಿವೆ ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಕಾರ್ಯದರ್ಶಿ ರಜನೀಶ್ ವೈಶ್ ಜೊತೆಗೆ ತೀವ್ರ ಚರ್ಚೆಯೂ ನಡೆಯಿತು. “ಸಂತ್ರಸ್ತರ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಲಾಗಿದೆ ಎಂದು ನ್ಯಾಯಾಲಯವೇ ಹೇಳಿದೆ. ಸಂತ್ರಸ್ತರ ಪುನರ್ವಸತಿಗಳಿಗೆ ನೀರಿನ ಸೌಲಭ್ಯ ಒದಗಿಸಲಾಗಿದೆ” ಎಂದು ವೈಶ್ ಹೇಳುತ್ತಿದ್ದರು. ಎನ್‍ಬಿಎ ನಾಯಕಿ ಮೇಧಾ ಪಾಟ್ಕರ್ ಸಂತ್ರಸ್ತರ ಸಮಸ್ಯೆ ಪರಿಹಾರವಾಗಿಲ್ಲ ಎಂದು ವಾದಿಸಿದರು. ನಿಸಾರ್ಪುರ ಮತ್ತು ಅವಲ್ಡಾದ ಸಂತ್ರಸ್ತರು ಸೌಲಭ್ಯ ಸಿಕ್ಕಿರುವುದನ್ನು ಅಲ್ಲಗಳೆದರು. ಬರ್ವಾನಿ ಜಿಲ್ಲಾಧಿಕಾರಿ ಸಂತ್ರಸ್ತರ ಪುನರ್ವಸತಿ ಕೇಂದ್ರದ ನಿಜವಾದ ಸ್ಥಿತಿಯನ್ನು ಸರ್ಕಾರದ ಮುಂದಿಡುತ್ತಿಲ್ಲ ಎಂದು ಸಂತ್ರಸ್ತ ರಾಮೇಶ್ವರ ಬಿಲಾಲ ಹೇಳಿದ್ದಾರೆ.

ಮತ್ತೊಂದೆಡೆ ಪ್ರಮುಖ ನಾಗರಿಕ ಸಂಘಟನೆಯೂ ದೆಹಲಿಯಲ್ಲಿ ಜಲಸಂಪನ್ಮೂಲ ಸಚಿವಾಲಯದ ಮುಂದೆ ಪ್ರತಿಭಟನೆ ನಡೆಸಿ ಕಾರ್ಯದರ್ಶಿಗೆ ಬೇಡಿಕೆ ಸಲ್ಲಿಸಿದ್ದಾರೆ. `ಸಂತ್ರಸ್ತರ ಬಗ್ಗೆ ಭಾರತ ಸರ್ಕಾರದ ನಿಲುವು ಶೋಚನೀಯ ಮತ್ತು ಪ್ರಜಾಸತ್ತಾತ್ಮಕವಲ್ಲ. ಗುಜರಾತಿನ ಕಾಲುವೆಗಳು ಪೂರ್ಣಗೊಂಡಿಲ್ಲ ಮತ್ತು ಸರ್ಕಾರ ನೀರಾವರಿ ಪ್ರದೇಶವನ್ನು ಕಳೆದ ವರ್ಷ 18 ಲಕ್ಷ ಹೆಕ್ಟೇರುಗಳಿಂದ 12 ಲಕ್ಷ ಹೆಕ್ಟೇರಿಗೆ ಇಳಿಸಿದೆ’ ಎಂದು ಅವರು ಹೇಳಿದ್ದಾರೆ.