`ನಿತ್ಯಾನಂದಾಶ್ರಮದ ಮಹಾಯೋಗಿನಿಯಿಂದ ಅವಮಾನಕಾರಿ ಫೇಸ್ಬುಕ್ ಪೋಸ್ಟ್ , ಬೆದರಿಕೆ’

ಡಿಜಿಪಿಗೆ ವಿಚಾರವಾದಿ

ನರೇಂದ್ರ ನಾಯಕ್ ದೂರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬಿಡದಿ ಆಶ್ರಮದ ನಿತ್ಯಾನಂದ ಹಾಗೂ ಮಹಾಯೋಗಿನಿ ನಿತ್ಯ ಮಹಾಯೋಗಾನಂದ ಎಂಬಾಕೆಯ ವಿರುದ್ಧ ವಿಚಾರವಾದಿ ನರೇಂದ್ರ ನಾಯಕ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ದಾಖಲಿಸಿದ್ದು, ಮಹಾಯೋಗಿನಿ ತಮ್ಮ ಬಗ್ಗೆ ಫೇಸ್ಬುಕ್ಕಿನಲ್ಲಿ ಅವಮಾನಕಾರಿ

ಪೋಸ್ಟ್ ಪ್ರಕಟಿಸಿ ತಮಗೆ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿದ್ದಾರೆ. ಹಿರಿಯ ನಾಗರಿಕನಾಗಿರುವ ಹಾಗೂ ಸಾಮಾಜಿಕ ಕಾರ್ಯಕರ್ತ ಹಾಗೂ ವಿಚಾರವಾದಿಯಾಗಿದ್ದುಕೊಂಡು  ಪವಾಡ ಬಯಲು ಕಾರ್ಯಕ್ರಮಗಳನ್ನು ನಡೆಸುವ ತನ್ನ ಈ ದೂರನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ನಾಯಕ್ ಅವರು ಪೊಲೀಸ್ ಮಹಾನಿರ್ದೇಶಕರನ್ನು ಆಗ್ರಹಿಸಿದ್ದಾರೆ.

ನಿತ್ಯಾನಂದ ಮತ್ತಾತನ ಕೆಲ ಅನುಯಾಯಿಗಳು ತಮಗೆ ಮೂರನೇ ಕಣ್ಣಿದೆ ಹಾಗೂ ಅಕ್ಷಿಃಪಟಲದ ಮೇಲೆ ಬೆಳಕು ಬೀಳದೇ ಇದ್ದರೂ ಕಣ್ಣಿಗೆ ಎಲ್ಲವೂ ಕಾಣಿಸುತ್ತದೆ, ಮನುಷ್ಯರ ದೇಹದೊಳಗೆ ಕೂಡ ನೋಡಬಹುದಾಗಿದೆ ಎಂದು ವೀಡಿಯೋವೊಂದರಲ್ಲಿ ಹೇಳಿಕೊಂಡಿರುವುದನ್ನು ತಿಳಿದು ಸೀಲ್ ಮಾಡಲ್ಪಟ್ಟ ಕರೆನ್ಸಿ ನೋಟ್ ಒಂದರ ಸೀರಿಯಲ್ ಸಂಖ್ಯೆಯನ್ನು ಓದುವಂತೆ ತಾವು ಸವಾಲು ಹಾಕಿದ್ದರೂ ಕೆಲವೊಂದು ಫೋನ್ ಕರೆಗಳು ಬಿಟ್ಟರೆ ಯಾರೂ ಇದನ್ನು ಸ್ವೀಕರಿಸುವ ಗಂಭೀರ ಪ್ರಯತ್ನ ನಡೆಸಿರಲಿಲ್ಲ ಎಂದು ನಾಯಕ್ ಹೇಳಿಕೊಂಡಿದ್ದಾರೆ. ಆದರೆ ಡಿಸೆಂಬರ್ 4ರಂದು ಎರಡನೇ ಆಪಾದಿತೆ  ತನ್ನ ಫೇಸ್ಬುಕ್ ಪುಟದಲ್ಲಿನ ಪೋಸ್ಟ್ ಒಂದರ ಮೂಲಕ ತನ್ನನ್ನು ಅವಮಾನಿಸಿದ್ದರೆಂದು ನರೇಂದ್ರ ನಾಯಕ್ ಅವರು ಆರೋಪಿಸಿದ್ದಾರೆ.

ಈ ಫೇಸ್ಬುಕ್ ಪೋಸ್ಟಿನಲ್ಲಿ ಆಕೆ ತಾನು ತನ್ನ ಮೂರನೇ ಕಣ್ಣಿನ ಶಕ್ತಿಯನ್ನು ತೋರಿಸುವುದಾಗಿ, ಇದರಿಂದ ಮುಂದಿನ 48 ಗಂಟೆಗಳೊಳಗಾಗಿ ನಾಯಕ್ ಅವರ ಖಾಸಗಿ ಅಂಗದಲ್ಲಿ ಕ್ಯಾನ್ಸರ್ ರೋಗ ಹರಡುವುದೆಂದು, ಈ ಬಗ್ಗೆ ಪರೀಕ್ಷೆ ನಡೆಸಬೇಕೆಂದೂ ಹಾಗೂ ಅದಕ್ಕೆ ಪರಿಹಾರಕ್ಕಾಗಿ ಬಿಡದಿಯ ಸ್ವಾಮಿಯ ಬಳಿ ಬರುವಂತೆಯೂ ಬರೆದಿದ್ದಾಳೆ.

ಆಕೆ ಇದೇ ರೀತಿ ಇನ್ನಿತರಿರಿಗೂ ಅವಮಾನಿಸಿದ್ದಾಳೆಂದು ನವೆಂಬರ್ 26ರಂದು ಆಕೆ ಬೇರೊಬ್ಬರನ್ನುದ್ದೇಶಿಸಿ ಮಾಡಿದ ಇನ್ನೊಂದು ಫೇಸ್ಬುಕ್ ಪೋಸ್ಟನ್ನೂ ನರೇಂದ್ರ ನಾಯಕ್ ಉಲ್ಲೇಖಿಸಿದ್ದಾರೆ. ಇಲ್ಲಿ ಆಕೆ ಆ ವ್ಯಕ್ತಿಗೆ ತನ್ನ ಮೂರನೇ ಕಣ್ಣು ಆತನಿಗೆ ಮೆದುಳಿನ ಕ್ಯಾನ್ಸರ್ ನೀಡುವುದಾಗಿ ಹೇಳಿಕೊಂಡಿದ್ದಳು ಎಂದು ನಾಯಕ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ದೂರಿನೊಂದಿಗೆ ಮಹಾಯೋಗಿನಿಯ ಫೇಸ್ಬುಕ್ ಪುಟದ ಸ್ಕ್ರೀನ್ ಶಾಟನ್ನೂ ನರೇಂದ್ರ ನಾಯಕ್ ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.