ಮಂಪರು ಪರೀಕ್ಷೆ ತನಿಖೆಯ ಉಪಕರಣವಲ್ಲ

ತಜ್ಞರ ಅಭಿಪ್ರಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಪರು ಪರೀಕ್ಷೆ (ನಾರ್ಕೊ ಅನಾಲಿಸಿಸ್) ಮತ್ತು ಮೆದುಳು ನಕ್ಷೆ (ಬ್ರೈನ್ ಮ್ಯಾಪಿಂಗ್) ಪರೀಕ್ಷೆಯನ್ನು ಕೇವಲ ಚಿಕಿತ್ಸೆಯನ್ನು ಗುಣಪಡಿಸಲು ಬಳಸಲಾಗುವ ಒಂದು ವಿಧಾನ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಹೇಳಿದ್ದು, ಇದೇ ಸಂದರ್ಭ ಈ ವಿಧಾನದ ಮೂಲಕ ಅಪರಾಧಗಳ ತನಿಖೆಯನ್ನು ಕೂಡಾ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.

`ಬ್ರೈನ್ ಮ್ಯಾಪಿಂಗ್ ಮತ್ತು ಮಂಪರು ಪರೀಕ್ಷೆ ವಿಶ್ಲೇಷಣೆಯಲ್ಲಿ ವೈದ್ಯಕೀಯ ಕಾನೂನಿನ ಅಂಶಗಳು’ ಎಂಬ ವಿಚಾರದಲ್ಲಿ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ತ್ರಿಶೂರು ಎಂಡ್ ಕ್ಯಾಲಿಕಟ್ ಮೆಡಿಕಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಜೇಮ್ಸ್ ಟಿ ಆ್ಯಂಟೋನಿ ಮಾತನಾಡಿ, “ಮನೋರೋಗ ತಜ್ಞರು ಈ ವಿಧಾನವನ್ನು ರೋಗ ಯಾವುದೆಂದು ಪತ್ತೆ ಹಚ್ಚಲು ಹಾಗೂ ಸಮಸ್ಯೆಯನ್ನು ಕಂಡುಹಿಡಿಯಲು ಬಳಸುತ್ತಾರೆ. ಆದರೆ ಇದನ್ನು ತನಿಖೆ ಮಾಡಲು ಉಪಯೋಗಿಸಬಾರದು” ಎಂದರು.

“ಈ ವಿಧಾನಗಳು ವೈಜ್ಞಾನಿಕ ವಿಧಾನಗಳಲ್ಲ. ಇದು ವೈಜ್ಞಾನಿಕವಾಗಿಲ್ಲದೇ ಇರುವಾಗ ಮತ್ತೆ ಈ ವಿಧಾನವನ್ನು ಆರೋಪಿಯ ತನಿಖೆಗಳ ವಿಚಾರಣೆಗಾಗಿ ಅನುಮತಿ ನೀಡುವ ಅಗತ್ಯವೇನಿದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಹೇಳಿದರು.

“ಮಂಪರು ಪರೀಕ್ಷೆ ನಡೆಸುವುದು ಅಸಂವಿಧಾನಿಕ ಎಂದು ಮಹತ್ವದ ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಾಲಯ, ಯಾವುದೇ ಆರೋಪಗಳನ್ನು ಹೊತ್ತಿದ್ದರೂ ವ್ಯಕ್ತಿಯೊಬ್ಬನ ಒಪ್ಪಿಗೆಯಿಲ್ಲದೆ ಮಂಪರು ಪರೀಕ್ಷೆ ನಡೆಸುವಂತಿಲ್ಲ ಮತ್ತು ಅದನ್ನು ಸಾಕ್ಷಿಯನ್ನಾಗಿ ನ್ಯಾಯಾಲಯ ಪರಿಗಣಿಸುವಂತಿಲ್ಲ ಎಂದು 2010ರಲ್ಲಿ ಹೇಳಿದೆ. ಇಂತಹ ಪರೀಕ್ಷೆಗಳಲ್ಲಿ ಸಾವು ಸಂಭವಿಸಿದರೆ ಹೊಣೆಗಾರರು ಯಾರು, ಈ ಕುರಿತಾಗಿ ಹಲವು ನಿಬಂಧನಗಳನ್ನು ಕೂಡಾ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ” ಎಂದರು.

ಇದಕ್ಕೂ ಮುನ್ನ ಮಾತನಾಡಿದ ಆಯುಕ್ತ ಚಂದ್ರಶೇಖರ್, “ಮಂಪರು ಪರೀಕ್ಷೆ, ಮೆದುಳಿನ ಪರೀಕ್ಷೆಗಳಿಂದ ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಲಾಗಿದೆ. ಅಲ್ಲದೆ ಆರೋಪಿಗಳನ್ನು ಕೂಡಾ ನಿಖರವಾಗಿ ಪತ್ತೆಹಚ್ಚಲಾಗಿದೆ. ಇಂತಹ ಪರೀಕ್ಷೆಗಳು ತನಿಖೆಗೆ ಹೆಚ್ಚು ಪೂರಕವಾಗಿದೆ” ಎಂದು ಹೇಳಿದ್ದರು.